ಬೆಂಗಳೂರು: ಗಣೇಶನ ಹಬ್ಬ ಮಾಡೋದಕ್ಕೆ ಸರ್ಕಾರ ಅನುಮತಿಯನ್ನೇನೋ ಕೊಟ್ಟಿದೆ. ಆದ್ರೆ ಒಂದಷ್ಟು ಷರತ್ತುಗಳನ್ನು ವಿಧಿಸಿದೆ. ಅದರಲ್ಲಿ ಇಷ್ಟೇ ಅಡಿ ಗಣೇಶನನ್ನು ಕೂಡಿಸಬೇಕೆಂಬುದು ಒಂದು ಷರತ್ತು ಹಾಕಿದ್ದಾರೆ. ಮನೆಗಳಲ್ಲಿ 2 ಅಡಿ, ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಗಣೇಶನನ್ನ ಇಡಲು ಸೂಚಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ನಲ್ಲಿ ವಿರೋಧ ವ್ಯಕ್ತವಾಗಿದೆ.
ಈ ಸಂಬಂಧ ಹರಿಹಾಯ್ದಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಗಣೇಶನ ಹಬ್ಬಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ ರಾಜ್ಯ ಸರ್ಕಾರ ಈ ರೀತಿಯಾಗಿ ಹೇಳಿದೆ. ಅರ್ಥಹೀನ ನಿರ್ಬಂಧ ಹೇರುವ ಮೂಲಕ ಗಣೇಶ ತಯಾರಕರ ಬದುಕಿನ ಜೊತೆ ಚೆಲ್ಲಾಟವಾಡಿದೆ. ತಕ್ಷಣವೇ ಈ ನಿರ್ಬಂಧ ತೆರವು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈಗಾಗ್ಲೇ ತಯಾರಕರು ಲಕ್ಷಾಂತರ ಮೂರ್ತಿಗಳನ್ನ ತಯಾರಿಸಿದ್ದಾರೆ. ತಯಾರಕರು ಕೊನೆ ಕ್ಷಣದಲ್ಲಿ ಇಂಥಹ ನಿರ್ಧಾರ ಕೈಗೊಂಡರೆ ಅವರ ಬದುಕು ಏನಾಗಬೇಡ ಎಂದು ಪ್ರಶ್ನಿಸಿದ್ದಾರೆ.
ಮೊದಲೇ ಇದು ಕೊರೊನಾ ಸಮಯ. ಆದಾಯವಿಲ್ಲ ಏನಿಲ್ಲ. ಅದರಲ್ಲೂ ತಮ್ಮ ಬಳಿಯಿದ್ದ ಹಣವನ್ನೆಲ್ಲಾ ಹಾಕಿ ಮೂರ್ತಿಗಳನ್ನ ತಯಾರು ಮಾಡಿದ್ದಾರೆ. ಎರಡ್ಮೂರು ತಿಂಗಳ ಮೊದಲೇ ಈ ರೀತಿಯಾದ ರೂಲ್ಸ್ ಇರುತ್ತೆ ಅಂತ ಹೇಳಿದಿದ್ರೆ ತಯಾರಕರು ಹಣ ಖರ್ಚು ಮಾಡ್ತಾನೆ ಇರ್ಲಿಲ್ಲ ಎಂದಿದ್ದಾರೆ.