Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗಣೇಶ ಹಬ್ಬ ಆಚರಣೆ : ಈ ಬಾರಿ ಗಣೇಶೋತ್ಸವ ಹೇಗಿರಬೇಕು ? ಗಣೇಶ ಪ್ರತಿಷ್ಠಾಪನೆ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಪೂರ್ವಭಾವಿ ಸಭೆ

Facebook
Twitter
Telegram
WhatsApp

ಚಿತ್ರದುರ್ಗ,(ಆಗಸ್ಟ್ 22) : ಜಿಲ್ಲೆಯಲ್ಲಿ ಈ ಬಾರಿ  ಗಣೇಶ ಹಬ್ಬವನ್ನು ಸರ್ಕಾರದ ಮಾರ್ಗಸೂಚಿ ಪಾಲನೆಯೊಂದಿಗೆ ಭಕ್ತಿಪೂರ್ವಕ, ಸೌಹಾರ್ದಯುತ ಹಾಗೂ ವಿಜೃಂಭಣೆಯಿಂದ ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ 2022ನೇ ಸಾಲಿಗೆ ಗೌರಿ-ಗಣೇಶ ಹಬ್ಬದ ಆಚರಣಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯ ಗಣೇಶ ಪ್ರತಿಷ್ಠಾಪನೆ ಮುಖಂಡರು ಹಾಗೂ ವಿವಿಧ ಕೋಮಿನ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ, ಕೋಮುಭಾವನೆಗಳಿಗೆ ಧಕ್ಕೆಯಾಗದಂತೆ ಶಾಂತಿ ಸೌಯಾರ್ದಯುತವಾಗಿ ಗಣೇಶ ಹಬ್ಬ ಆಚರಣೆ ಮಾಡಬೇಕು ಎಂದು ತಿಳಿಸಿದರು.

ಪರಿಸರಕ್ಕೆ ಹಾನಿಕಾರಕವಾಗಿರುವ ಪಿಒಪಿ ಮತ್ತು ಲೋಹ ಮಿಶ್ರಿತ ಬಣ್ಣದಿಂದ (ಆಯಿಲ್ ಪೇಂಟ್) ತಯಾರಿಸಿದ ವಿಗ್ರಹಗಳನ್ನು ಯಾವುದೇ ಜಲಮೂಲಗಳಲ್ಲಿ ವಿಸರ್ಜನೆಯಾಗದ ರೀತಿಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಕ್ರಮ ಕೈಗೊಳ್ಳಬೇಕು. ಪಿಒಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ವ್ಯಾಪಾರ ಲೈಸನ್ಸ್ ನೀಡದಿರಲು ಮತ್ತು ಲೈಸೆನ್ಸ್ ಪಡೆಯದೇ ಅಧಿಕೃತವಾಗಿ ತಯಾರಿ, ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ತಕ್ಷಣ ಜರುಗಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬೇರೆ ಊರುಗಳಿಂದ ಮತ್ತು ರಾಜ್ಯಗಳಿಂದ ಸಾಗಾಣಿಕೆಯಾಗುವಂತಹ ಪಿಓಪಿ ವಿಗ್ರಹಗಳನ್ನು ತಡೆಗಟ್ಟಲು ಚೆಕ್‍ಪೋಸ್ಟ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ನಿರ್ದಿಷ್ಟ ಪ್ರದೇಶದಲ್ಲಿ ಸ್ಥಾಪಿಸಲಾಗುವ ಸಾರ್ವಜನಿಕ ಗಣಪತಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟ ಜಲಮೂಲಗಳನ್ನು ನಿಗದಿಪಡಿಸಬೇಕು, ಗಣೇಶಮೂರ್ತಿ ವಿಸರ್ಜನೆ ಮಾಡುವ ಸ್ಥಳಗಳ ಕುರಿತು ಸ್ಥಳೀಯವಾಗಿ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದರು.

ಸಾರ್ವಜನಿಕವಾಗಿ ಇಡಲಾಗುವ  ಗಣೇಶ ವಿಗ್ರಹಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟು ಅನುಮತಿ ಪಡೆದ ನಂತರವೇ ಸ್ಥಾಪಿಸಬೇಕು.  ಶಾಲಾ-ಕಾಲೇಜುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಮಾರ್ಗಸೂಚಿ ಕುರಿತಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಹಿತಿ ಫಲಕಗಳನ್ನು ಹಾಕಬೇಕು.  ಬೆಸ್ಕಾಂ, ಅಗ್ನಿಶಾಮಕ ಇಲಾಖೆಗಳು ಗಣೇಶ ಹಬ್ಬ ಸಂದರ್ಭದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಎಲ್ಲರೂ ಶಾಂತಿ, ಸಂಯಮದಿಂದ ವರ್ತಿಸಬೇಕು,  ಸಣ್ಣಪುಟ್ಟ ಮನಸ್ತಾಪಗಳನ್ನು ದೊಡ್ಡದಾಗಿಸದೆ, ಸ್ಥಳೀಯವಾಗಿಯೇ ಪರಿಹರಿಸಿಕೊಂಡು, ಕೋಮುಸೌಹಾರ್ದತೆಯೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಆದ್ಯತೆ ನೀಡಬೇಕು.  ಜಿಲ್ಲೆಯಲ್ಲಿ ಇನ್ನೂ ಕೂಡ ಕೋವಿಡ್ ಸೋಂಕು ಪ್ರಕರಣಗಳು ಕಂಡುಬರುತ್ತಿದ್ದು, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದನ್ನು ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕು.  ಸಾರ್ವಜನಿಕರು ಪಿಒಪಿ ಹಾಗೂ ರಾಸಾಯನಿಕ ಮಿಶ್ರಿತ ಗಣೇಶ ಮೂರ್ತಿಗಳನ್ನು ಬಳಸದೆ, ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮತ್ತು ನೈಸರ್ಗಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಮಾತ್ರ ಬಳಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಮುಖಂಡರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಮಾಡಲಾಗಿದೆ. ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಭಕ್ತಿಪೂರ್ವಕವಾಗಿ ನಾವೆಲ್ಲರೂ ಆಚರಿಸಬೇಕಿದೆ. ಪರಿಸರ ಅಧಿಕಾರಿಗಳು ಸೂಚಿಸಿದ ಎಲ್ಲಾ ಸಲಹೆ-ಸೂಚನೆಗಳನ್ನು ಪಾಲಿಸುವ ಮೂಲಕ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಬೇಕು ಎಂದರು.

ನಗರಸಭೆ, ಪೊಲೀಸ್, ಅಗ್ನಿಶಾಮಕ ಹಾಗೂ ಬೆಸ್ಕಾಂ ಸೇರಿದಂತೆ ಈ ನಾಲ್ಕು ಇಲಾಖೆಗಳಿಂದ ಒಬ್ಬೊಬ್ಬ ಅಧಿಕಾರಿಗಳನ್ನು ನೇಮಕ ಮಾಡಿ ಸಿಂಗಲ್ ವಿಂಡೋದಲ್ಲಿ (ಏಕಗವಾಕ್ಷಿ ಪದ್ಧತಿ) ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವುದು ಸೂಕ್ತ.  ಇದಕ್ಕಾಗಿ ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯಲ್ಲಿ ಕೌಂಟರ್ ಪ್ರಾರಂಭಿಸಿದಲ್ಲಿ  ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿ ತಪ್ಪಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯಿತಿಯಲ್ಲಿ ವ್ಯವಸ್ಥಿತವಾಗಿ ಸಿಂಗಲ್ ವಿಂಡೋ ಸ್ಥಾಪನೆ ಮಾಡಿ, ಗಣಪತಿ ಪ್ರತಿಷ್ಠಾಪನೆಗೆ ಒಂದೇ ಕಡೆ ಅನುಮತಿ ನೀಡಲು ವ್ಯವಸ್ಥೆ ಮಾಡಬೇಕು.  ಭದ್ರತೆ ಕುರಿತಂತೆ ಪೊಲೀಸ್ ಅಧಿಕಾರಿಗಳು ಮಫ್ತಿಯಲ್ಲಿದ್ದು ಕಟ್ಟೆಚ್ಚರ ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಾಗ ಸಂಚಾರ ದಟ್ಟಣೆಯಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಜಾಗದಲ್ಲಿಯೇ ಪ್ರತಿಷ್ಠಾಪನೆ ಮಾಡಬೇಕು.  ರಸ್ತೆಯಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ಹಾಗೂ ವಾಹನ ಓಡಾಟಕ್ಕೆ ತೊಂದರೆ ಮಾಡಲು ಅವಕಾಶ ನೀಡುವುದಿಲ್ಲ.  ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕಗಳ ಬಳಕೆಯನ್ನು  ನಿಷೇಧಿಸಲಾಗಿದ್ದು, ಬೆಳಗಿನ ಸಮಯದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನಿಗದಿತ ಡೆಸಿಬಲ್ ಪ್ರಮಾಣದಲ್ಲಿ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶವಿದೆ. ಗಣೇಶ ಪ್ರತಿಷ್ಟಾಪನೆಯ ಪೆಂಡಾಲ್‍ಗಳಲ್ಲಿ ಅಗ್ನಿನಂದಕಗಳನ್ನು ಬಳಕೆ ಮಾಡಬೇಕು,  ಪೆಂಡಾಲ್‍ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು.  ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ, ವಿಸರ್ಜನೆವರೆಗೂ ಆಯಾ ಸಮಿತಿಯವರು ಗಣೇಶ ಮೂರ್ತಿಯ ಭದ್ರತೆ ಹಾಗೂ ವ್ಯವಸ್ಥಿತ ಮೆರವಣಿಗೆಗೆ ಕಾರ್ಯಕರ್ತರನ್ನು ನೇಮಿಸಿಕೊಂಡು, ಅವರಿಗೆ ಗುರುತಿನ ಕಾರ್ಡ್ ನೀಡುವ ಕಾರ್ಯ ಆಗಬೇಕು.  ಮೆರವಣಿಗೆ ಸಂದರ್ಭದಲ್ಲಿ ಯಾರೂ ಕೂಡ ಅಸಭ್ಯವಾಗಿ ವರ್ತಿಸುವುದು, ಕಾನೂನು ಉಲ್ಲಂಘಿಸುವುದು ಮಾಡಬಾರದು, ಈ ನೆಲದ ಸಂಸ್ಕøತಿ ಬಿಂಬಿಸುವ ಡೊಳ್ಳು, ಚಂಡೆಮದ್ದಳೆ ಮುಂತಾದ ಜಾನಪದ ಕಲಾಮೇಳಗಳು, ವಾದ್ಯ ಪರಿಕರಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಡಿಜೆ ಯನ್ನು ಬಳಸದೇ ಭಿನ್ನವಾಗಿ ಅದ್ಧೂರಿಯಾಗಿ ಮೆರವಣಿಗೆಯನ್ನು ಮಾಡಬಹುದು ಎಂಬ ಸಂದೇಶವನ್ನು ಚಿತ್ರದುರ್ಗ ಜಿಲ್ಲೆಯಿಂದ ಇಡೀ ನಾಡಿಗೆ ನೀಡುವಂತಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಗಣೇಶ ಹಬ್ಬದ ಶುಭಾಶಯಗಳಿಗೆ ಸಂಬಂಧಿಸಿದಂತೆ ನಗರ, ಪಟ್ಟಣ ಪ್ರದೇಶಗಳಲ್ಲಿ ವಿವಿಧ ಬಗೆಯ ಫ್ಲೆಕ್ಸ್‍ಗಳನ್ನು ಹಾಕಲು ಬಯಸುವವರು ಸಂಬಂಧಪಟ್ಟ ನಗರಸಭೆ, ಪುರಸಭೆ, ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ,  ಅನುಮತಿ ರಹಿತ ಬೋರ್ಡ್‍ಗಳನ್ನು ತೆರವುಗೊಳಿಸಲಾಗುವುದು.

ಸುಪ್ರಿಂಕೋರ್ಟ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಪ್ರಕಾರ ಡಿಜೆ ಬಳಕೆಗೆ ಅವಕಾಶ ಕೊಡಲು ಸಾಧ್ಯವಿಲ್ಲ. ಈ ಸಂಬಂಧ ಮುಂದಿನ ದಿನಗಳಲ್ಲಿ ಸರ್ಕಾರದ ಸೂಚನೆ-ಆದೇಶದನ್ವಯ ಜಿಲ್ಲಾಡಳಿತ ನಡೆದುಕೊಳ್ಳಲಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಗಣೇಶ ಉತ್ಸವ ಸಮಿತಿಯವರು ಮಾತನಾಡಿ, ಗಣೇಶ ಹಬ್ಬದ ಸಂದರ್ಭಕ್ಕಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಶಾಂತಿ, ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಎಲ್ಲ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು, ಗಣೇಶ ಪ್ರತಿಷ್ಠಾಪನೆ ಮುಖಂಡರು, ಪದಾಧಿಕಾರಿಗಳು ಇದ್ದರು.

ಮಾಹಿತಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದು ಸಂವಿಧಾನ ದಿನಾಚರಣೆ | ಕಾರಣ ಮತ್ತು ಮಹತ್ವವೇನು ? ಇಲ್ಲಿದೆ ಸಂಪೂರ್ಣ ಮಾಹಿತಿ…!

ಸುದ್ದಿಒನ್ | ರಾಷ್ಟ್ರೀಯ ಸಂವಿಧಾನ ದಿನ 2024 : ಬ್ರಿಟಿಷರ ಆಳ್ವಿಕೆಯಲ್ಲಿ ಸುಮಾರು 200 ವರ್ಷಗಳ ಕಾಲ ಲೂಟಿ ಮತ್ತು ಅಸ್ತವ್ಯಸ್ತಗೊಂಡಿದ್ದ ಭಾರತವನ್ನು ಸ್ವಾತಂತ್ರ್ಯದ ನಂತರ ಒಂದುಗೂಡಿಸುವಲ್ಲಿ ನಮ್ಮ ಸಂವಿಧಾನವು ಪ್ರಮುಖ ಪಾತ್ರ ವಹಿಸಿದೆ.

ಕಡಿಮೆ ರಕ್ತದ ಒತ್ತಡ ಕಾರಣಗಳೇನು ? ತಡೆಗಟ್ಟುವುದು ಹೇಗೆ ?

ಸುದ್ದಿಒನ್ | ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ”

ಈ ರಾಶಿಯ ಕಾಳುಮೆಣಸು ಮತ್ತು ಏಲಕ್ಕಿ ವ್ಯಾಪಾರ ವಹಿವಾಟಗಾರರಿಗೆ ಭಾರಿ ನಷ್ಟ

ಈ ರಾಶಿಯ ಕಾಳುಮೆಣಸು ಮತ್ತು ಏಲಕ್ಕಿ ವ್ಯಾಪಾರ ವಹಿವಾಟಗಾರರಿಗೆ ಭಾರಿ ನಷ್ಟ, ಈ ರಾಶಿಯವರ ಆದಾಯ ದ್ವಿಗುಣ ನೋ ಡೌಟ್ : ಈ ರಾಶಿಯವರಿಗೆ ಉನ್ನತ ಸ್ಥಾನ ದೊರೆತು, ರಾಜಕೀಯ ಸಂಪೂರ್ಣ ಬೆಂಬಲ ಸಿಗಲಿದೆ,

error: Content is protected !!