ಚಿತ್ರದುರ್ಗ: ಅಹಿಂಸಾ ಮಾರ್ಗದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಗಾಂಧಿಜಿಯವರ ಮಾರ್ಗದಂತೆ ಎಲ್ಲರೂ ನಡೆದಾಗ ದೇಶ ಶಾಂತಿಯುತವಾಗಿರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಗಾಂಧಿ ಹಾಗೂ ಲಾಲ್‍ಬಹದ್ದೂರ್‍ಶಾಸ್ತ್ರಿರವರ ಜಯಂತಿಯಲ್ಲಿ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮೇಲೆ ಗಾಂಧಿಜಿ ದೇಶದ ಸ್ವಾತಂತ್ರ್ಯ ಹಾಗೂ ಕಾಂಗ್ರೆಸ್ ಪಕ್ಷದ ನೇತೃವವನ್ನು ವಹಿಸಿಕೊಂಡು ಬ್ರಿಟೀಷರ ವಿರುದ್ದ ಸತ್ಯ ಮತ್ತು ಅಹಿಂಸೆಯಿಂದ ಹೋರಾಡಿದರು. ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಕುಲೆರವರ ಸೂಚನೆಯಂತೆ ದೇಶ ಪರ್ಯಟನೆ ಮಾಡಿದ ಗಾಂಧಿ ಮೈಮೇಲೆ ಬಟ್ಟೆಯಿಲ್ಲದ ಬಡವರನ್ನು ಕಂಡು ತಾವು ಕೂಡ ಆಡಂಭರವಿಲ್ಲದೆ ಸರಳವಾಗಿ ಬದುಕಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂದು ಗುಣಗಾನ ಮಾಡಿದರು.
ಗಾಂಧಿ, ನೆಹರು ಇವರುಗಳು ದೇಶ ವಿಭಜನೆಗೆ ಕಾರಣ ಎಂದು ಬಿಜೆಪಿ.ಯವರು ಆಪಾದಿಸುತ್ತಿದ್ದಾರೆ. ಆದರೆ ಜಿನ್ನ ನೇತೃತ್ವದ ಮುಸ್ಲಿಂ ಲೀಗ್, ವಿ.ಡಿ.ಸಾವರ್ಕರ್, ಹಿಂದೂ ಮಹಾಸಭಾ ಇವರುಗಳು ಸೇರಿಕೊಂಡು ನಿಜವಾಗಿಯೂ ದೇಶ ವಿಭಜನೆ ಮಾಡಿದ್ದು, ಭಾರತ ವಿಜಭಜನೆಗೆ ಕಾಂಗ್ರೆಸ್ ಕಾರಣವಲ್ಲ ಎನ್ನುವುದನ್ನು ವಿರೋಧಿಗಳು ಮೊದಲು ಅರ್ಥಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಬಿಜೆಪಿ.ಯವರನ್ನು ಖುಷಿ ಪಡಿಸುವುದಕ್ಕಾಗಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ದೇಶ ವಿಭಜನೆಗೆ ನೆಹರು ಕಾರಣ ಎಂದು ಹೇಳುತ್ತಿರುವುದನ್ನು ಖಂಡಿಸಿ ಎಂ.ಕೆ.ತಾಜ್‍ಪೀರ್ ಗಾಂಧಿ ಎಂದಿಗೂ ಹಿಂಸೆಯನ್ನು ಪ್ರಚೋಧಿಸಿದವರಲ್ಲ. ಸತ್ಯ ಮತ್ತು ಅಹಿಂಸೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರಕ್ಕಾಗಿ ಹೋರಾಡಿದರು ಎಂದು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಸ್.ಕುಮಾರ್‍ಗೌಡ ಮಾತನಾಡುತ್ತ ಗಾಂಧಿ ಕೇವಲ ಭಾರತದಲ್ಲಷ್ಟೆ ಅಲ್ಲ. ಇಡಿ ವಿಶ್ವದಲ್ಲಿಯೇ ಪ್ರಸಿದ್ದಿ ಗಳಿಸಿದ್ದಾರೆ. ಕರಿಯರು ಮತ್ತು ಬಿಳಿಯರ ನಡುವೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಅಸಮಾನತೆ ವಿರೋಧಿಸಿ ಸಾಕಷ್ಟು ಹೋರಾಡಿ ಎಲ್ಲರೂ ಸಮಾನರು ಎನ್ನುವ ಸಂದೇಶವನ್ನು ಸಾರಿದ ಮಹಾತ್ಮಗಾಂಧಿ ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು ಎಂದು ಹೇಳಿದರು.
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮೇಲೆ ಗಾಂಧಿ ನಮ್ಮ ಜನರನ್ನು ಮೊದಲು ಬ್ರಿಟೀಷರ ದಾಸ್ಯದಿಂದ ಬಿಡುಗಡೆಗೊಳಿಸಬೇಕು ಎನ್ನುವ ಕಾರಣಕ್ಕಾಗಿ ಉಪ್ಪಿನ ಸತ್ಯಾಗ್ರಹ, ದಂಡಿ ಸತ್ಯಾಗ್ರಹ, ದುಂಡು ಮೇಜಿನ ಸಭೆ ನಡೆಸಿ ಸತ್ಯ ಮತ್ತು ಅಹಿಂಸೆಯ ಮೂಲಕ ಸ್ವಾತಂತ್ರ ಗಳಿಸಿಕೊಟ್ಟರು ಅಂತಹ ಮಹಾತ್ಮನನ್ನು ಪ್ರತಿಯೊಬ್ಬರು ನೆನೆಯಲೇಬೇಕು ಎಂದರು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಲಾಲ್‍ಬಹದ್ದೂರ್‍ಶಾಸ್ತ್ರಿರವರ ಧೈರ್ಯ ದೊಡ್ಡದು. ದೇಶದ ಪ್ರಧಾನಿಯಾಗಿ ಐಷಾರಾಮಿ ಜೀವನದಿಂದ ದೂರವಿದ್ದವರು. ಸರ್ಕಾರದಿಂದ ಯಾವುದೇ ಫಲವನ್ನು ಬಯಸಲಿಲ್ಲ.
ಪ್ರಧಾನಿಯಾಗಿದ್ದಾಗ ಬ್ಯಾಂಕ್‍ನಿಂದ ಸಾಲ ಪಡೆದು ಅಂಬಾಸಿಡರ್ ಕಾರು ಖರೀಧಿಸಿದ ಲಾಲ್‍ಬಹದ್ದೂರ್ ಶಾಸ್ತ್ರಿರವರ ಮರಣದ ನಂತರ ಸರ್ಕಾರ ಕಾರಿನ ಸಾಲವನ್ನು ಪಾವತಿಸುವುದಾಗಿ ಹೇಳಿದಾಗ ಅವರ ಪತ್ನಿ ಕಾರು ಮಾರಿ ಸಾಲ ತೀರಿಸುತ್ತೇವೆಂದು ಸರ್ಕಾರಕ್ಕೆ ನಯವಾಗಿ ಉತ್ತರಿಸಿದ್ದನ್ನು ಇಲ್ಲಿ ನೆನೆಯಲೇಬೇಕು ಎಂದು ಅವರಲ್ಲಿದ್ದ ಪ್ರಾಮಾಣಿಕತೆಯನ್ನು ನೆನಪಿಸಿಕೊಂಡರು.
ಕಾಂಗ್ರೆಸ್ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್ ಮಾತನಾಡಿ ಗಾಂಧಿ ಮತ್ತು ಲಾಲ್‍ಬಹದ್ದೂರ್‍ಶಾಸ್ತ್ರಿ ಇವರುಗಳು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದ ಫಲವಾಗಿ ಇಂದು ನಾವುಗಳು ಸ್ವಾತಂತ್ರ್ಯದ ಸುಖವನ್ನು ಅನುಭವಿಸುತ್ತಿದ್ದೇವೆ. ಕೋಮುವಾದಿ ಬಿಜೆಪಿ.ಯವರು ನೆಹರು, ಗಾಂದಿ, ಲಾಲ್‍ಬಹದ್ದೂರ್‍ಶಾಸ್ತ್ರಿ ಹಾಗೂ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಅಪವಾದ ಹೊರಿಸುತ್ತಿರುವುದರಲ್ಲಿ ಅರ್ಥವಿಲ್ಲ. ಉಪ್ಪಿನ ಸತ್ಯಾಗ್ರಹ, ದಂಡಿ ಸತ್ಯಾಗ್ರಹದ ಮೂಲಕ ಗಾಂಧಿಜಿ ಬ್ರಿಟೀಷರ ವಿರುದ್ದ ಹೋರಾಡಿದರು. ಸತ್ಯ ಮತ್ತು ಅಹಿಂಸೆಯೇ ಅವರ ಅಸ್ತ್ರವಾಗಿತ್ತು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಹನುಮಲಿ ಷಣ್ಮುಖಪ್ಪ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಜಯಣ್ಣ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು ಗಾಂಧಿಜಯಂತಿಯಲ್ಲಿ ಭಾಗವಹಿಸಿದ್ದರು.