ಬೆಂಗಳೂರು : ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕತ್ವದಿಂದ ಅಸಮಾಧಾನಗೊಂಡಿರುವ ಕರ್ನಾಟಕದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ರಾಜ್ಯದಲ್ಲಿ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಎಂಬ ಹೊಸ ರಾಜಕೀಯ ಪಕ್ಷವನ್ನು ಭಾನುವಾರ ಪ್ರಾರಂಭಿಸಿದ್ದಾರೆ.
ಬಳ್ಳಾರಿಯಿಂದ ಸುಮಾರು 61 ಕಿ.ಮೀ ದೂರದಲ್ಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,“ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಹೆಸರಿನಲ್ಲಿ, ಬಸವಣ್ಣನವರ ಚಿಂತನೆಯೊಂದಿಗೆ ಮತ್ತು ಜಾತಿ ಮತ್ತು ಧರ್ಮದ ನಡುವಿನ ಸಂಘರ್ಷಕ್ಕೆ ಉತ್ತೇಜನ ನೀಡುವ ರಾಜಕೀಯದಿಂದ ಯಾವುದೇ ಲಾಭವಿಲ್ಲ. ಮುಂದಿನ ದಿನಗಳಲ್ಲಿ ಈ ಸಂದೇಶದೊಂದಿಗೆ ರಾಜ್ಯಾದ್ಯಂತ ಪ್ರತಿ ಗ್ರಾಮಕ್ಕೂ ಹೋಗುತ್ತೇನೆ ಎಂದು ರೆಡ್ಡಿ ಹೇಳಿದ್ದಾರೆ.
ಬಿಜೆಪಿ ನಾಯಕರಾದ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರನ್ನು ಸದ್ಯಕ್ಕೆ ತಮ್ಮ ಹೊಸ ಪಕ್ಷಕ್ಕೆ ಸೇರಲು ಕರೆದಿಲ್ಲ ಎಂದು ಅವರು ಹೇಳಿದರು.
ಸೋಮಶೇಖರ್ ರೆಡ್ಡಿ ಬಳ್ಳಾರಿ ಶಾಸಕರಾಗಿದ್ದರೆ. ಅವರ ಸಹೋದರ ಕರುಣಾಕರ್ ಹರಪನಹಳ್ಳಿಯಿಂದ ಶಾಸಕರಾಗಿದ್ದಾರೆ. ಇಬ್ಬರೂ ಗಾಲಿ ಜನಾರ್ದನ ರೆಡ್ಡಿ ಸಹೋದರರು. ಮೊಳಕಾಲ್ಮೂರು ಕ್ಷೇತ್ರದ ಹಾಲಿ ಶಾಸಕ ಶ್ರೀರಾಮುಲು ಜನಾರ್ಧನ ರೆಡ್ಡಿ ಆಪ್ತ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿಯು ಕರ್ನಾಟಕ ಚುನಾವಣೆಗೆ ಮುಂಚಿತವಾಗಿ ಭ್ರಷ್ಟಾಚಾರ, ಹೆಚ್ಚುತ್ತಿರುವ ಆಂತರಿಕ ಕಲಹ, ಕೋಮು ಉದ್ವಿಗ್ನತೆ ಮತ್ತು ಅಭಿವೃದ್ಧಿಯ ಕೊರತೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇದೀಗ ಗಣಿಧಣಿ ರೆಡ್ಡಿ ಅವರ ರಾಜಕೀಯ ಪ್ರವೇಶದೊಂದಿಗೆ, ಬಿಜೆಪಿಗೆ ತಲೆನೋವು ಶುರುವಾಗಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಭಿಮಾನಿಯಾಗಿದ್ದ ಮತ್ತು ದಿವಂಗತ ಸುಷ್ಮಾ ಸ್ವರಾಜ್ ಅವರನ್ನು ತನ್ನ ‘ತಾಯಿ’ ಎಂದು ಪರಿಗಣಿಸಿದ ಗಣಿ ಉದ್ಯಮಿಯಿಂದ ಬಿಜೆಪಿ ಪಕ್ಷವು ಅಂತರ ಕಾಯ್ದುಕೊಂಡಿದ್ದರಿಂದ ರೆಡ್ಡಿ ಬಿಜೆಪಿಗೆ ಮರಳುವ ಪ್ರಯತ್ನ ವಿಫಲವಾಯಿತು.
ಮುಂದಿನ ದಿನಗಳಲ್ಲಿ ಕರ್ನಾಟಕ ಪ್ರವಾಸ ಮಾಡಿದ ನಂತರ ತಮ್ಮ ಹೊಸ ಪಕ್ಷ ಸ್ಪರ್ಧಿಸಲಿರುವ ಸ್ಥಾನಗಳ ಸಂಖ್ಯೆ ಮತ್ತು ಪಕ್ಷದ ಚಿಹ್ನೆ ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದಾಗಿ ಹೇಳಿದರು.