ಗೇಲ್ ಇಂಡಿಯಾ ಲಿಮಿಟೆಡ್ : ನೈಸರ್ಗಿಕ ಅನಿಲ ಸೋರಿಕೆ ನಿರ್ವಹಣೆ ಕುರಿತಂತೆ ಅಣಕು ಕಾರ್ಯಾಚರಣೆ : ಜಿಲ್ಲಾಧಿಕಾರಿ ಮೆಚ್ಚುಗೆ

2 Min Read

ಚಿತ್ರದುರ್ಗ, (ಡಿಸೆಂಬರ್. 08) : ಅನಿಲ ಸೋರಿಕೆ ಸಂದರ್ಭದ ಬಿಕ್ಕಟ್ಟು ನಿರ್ವಹಣೆಗೆ ಸಂಬಂಧಿಸಿದಂತೆ ಅಣಕು ಪ್ರಾತ್ಯಕ್ಷಿಕೆ ಕಾರ್ಯಾಚರಣೆ ಚಿತ್ರದುರ್ಗದ ಹೊಸಪೇಟೆ ರಸ್ತೆಯ ಜಿ.ಆರ್.ಹಳ್ಳಿ ಸಮೀಪದ ಗೇಲ್ ಇಂಡಿಯಾದ ಇಂಟರ್‍ಮಿಡಿಯೈಟ್ ಪಿಗ್ಗಿಂಗ್ ಸ್ಟೇಷನ್ ಆವರಣದಲ್ಲಿ ಬುಧವಾರ ನಡೆಯಿತು.

ತುರ್ತು ಅಣಕು ಕಾರ್ಯಾಚರಣೆಯನ್ನು ಗೇಲ್ ಇಂಡಿಯಾ ಲಿಮಿಟೆಡ್ ದಾಭೋಲ-ಬೆಂಗಳೂರು ನೈಸರ್ಗಿಕ ಅನಿಲ ಪೈಪ್‍ಲೈನ್ ಆಫ್-ಸೈಟ ಮಾಕ್ ಡ್ರಿಲ್ ಲೇವಲ್-3ರಲ್ಲಿ ಹಮ್ಮಿಕೊಳ್ಳಲಾಯಿತು.

ಗೇಲ್ ಇಂಡಿಯಾ ಲಿಮಿಟೆಡ್ ಚಿತ್ರದುರ್ಗ ವಿಭಾಗದ ಡಿಜಿಎಂ ಬಸವರಾಜ್ ಪೂಣೆ ಮಾತನಾಡಿ, ಪಿಎನ್‍ಜಿಆರ್‍ಜಿ ಮಾರ್ಗಸೂಚಿ ಪ್ರಕಾರ ಅಣಕು ಕಾರ್ಯಾಚರಣೆಯನ್ನು ಪ್ರತಿ ವರ್ಷವೂ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣೆ ತಂಡದೊಂದಿಗೆ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗುತ್ತಿದ್ದು, ಹಂತ-3ರ ಅಣಕು ಪ್ರದರ್ಶನ  ಬಹುದೊಡ್ಡ ಅಣಕು ಪ್ರದರ್ಶನವಾಗಿದೆ. ರಾಜ್ಯ ಅಗ್ನಿಶಾಮಕ ಸೇವೆಗಳು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಯಶಸ್ವಿಯಾಗಿ ಅಣಕು ಪ್ರದರ್ಶನ ನಡೆಸಲಾಯಿತು ಎಂದು ಹೇಳಿದರು.

ಮಹಾರಾಷ್ಟ್ರದ ರತ್ನಗಿರಿಯ ದಾಬೋಲದಿಂದ ಬೆಂಗಳೂರುವರೆಗೆ ನೈಸರ್ಗಿಕ ಅನಿಲ ಸಂಪರ್ಕದ ಪೈಪ್‍ಲೈನ್ ಹಾದುಹೋಗಿದೆ. ರೈತರ ಜಮೀನುಗಳಿಂದ ಪೈಪ್‍ಲೈನ್ ಹಾದುಹೋಗಿದ್ದು, ರೈತರು ಬೋರ್‍ವೆಲ್ ಕೊರೆಸುವ ಸಮಯದಲ್ಲಿ ಆಕಸ್ಮಿಕವಾಗಿ ಪೈಲ್‍ಲೈನ್ ಸೋರಿಕೆಯಾಗುವ ಸಂಭವವಿರುತ್ತದೆ. ಅನಿಲ ಸೋರಿಕೆ ಸಂದರ್ಭದ ಬಿಕ್ಕಟ್ಟನ್ನು ಹೇಗೆ ನಿರ್ವಹಿಸಬೇಕು ಎಂಬುವ ಉದ್ದೇಶದಿಂದ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಅನಿಲ ಸೋರಿಕೆ ನಿರ್ವಹಣೆಗೆ ಸಂಬಂಧಿಸಿದಂತೆ ಅಣಕು ಕಾರ್ಯಾರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಭದ್ರತಾ ಸಿಬ್ಬಂದಿ ತಂಡ, ಅಂಬುಲೈನ್ಸ್, ಆರೋಗ್ಯ ತಂಡ, ಅಗ್ನಿಶಾಮಕ ತಂಡ ಹಾಗೂ ನಿರ್ವಹಣೆ ತಂಡಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಕಸ್ಮಿಕವಾಗಿ ಅನಿಲ ಸೋರಿಕೆ ಉಂಟಾದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಗೇಲ್ ಇಂಡಿಯಾ ಸಿಬ್ಬಂದಿಗೆ ಶುಭಹಾರೈಸಿದರು.

ಗೇಲ್ ಇಂಡಿಯಾ ಸಿಬ್ಬಂದಿ ನರಸಿಂಹಮೂರ್ತಿ ಮಾತನಾಡಿ, ಗೇಲ್ ಇಂಡಿಯಾದಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಪೈಪ್‍ಲೈನ್‍ನಲ್ಲಿ ಅನಿಲ ಸೋರಿಕೆಯಾಗಿ ಅನಾಹುತವಾದಾಗ ಅದನ್ನು ಹೇಗೆ ನಿರ್ವಹಣೆ ಮಾಡುತ್ತೇವೆ ಎಂಬುವುದರ ಕುರಿತಂತೆ ಅಣಕು ಪ್ರದರ್ಶನ ನೀಡಲಾಗುತ್ತಿದೆ. ಅನಾಹುತಗಳು ಸಂಭವಿಸಿದಾಗ ಯಾವ ರೀತಿಯಾಗಿ ಪೂರ್ವಸಿದ್ದತೆ ಮಾಡಿಕೊಳ್ಳಲು ಅಣಕು ಪ್ರದರ್ಶನ ಅವಶ್ಯಕವಾಗಿದೆ ಎಂದು ಹೇಳಿದರು.

ಅಣಕು ಕಾರ್ಯಾರಣೆ:  ಗೇಲ್ ಇಂಡಿಯಾದ ಇಂಟರ್ ಮಿಡಿಯೈಟ್ ಪಿಗ್ಗಿಂಗ್ ಸ್ಟೇಷನ್ ಆವರಣದ ಹಂತ-3ರಲ್ಲಿ ಅನಿಲ ಸೋರಿಕೆಯಾದ ಮಾಹಿತಿ ಭದ್ರತಾ ಸಿಬ್ಬಂದಿಯಿಂದ ಕಚೇರಿಗೆ ಬರುತ್ತದೆ. ವಾಕಿಟಾಕಿ ಮೂಲಕ ಪರಸ್ಪರ ಸಂವನ ನಡೆಯುತ್ತದೆ. ತಕ್ಷಣವೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ  ಅನಿಲ ಸೋರಿಕೆಯಾದ ಸ್ಥಳದ ಸುತ್ತಮುತ್ತ ತುರ್ತು ಪರಿಸ್ಥಿತಿ ಘೋಷಿಸುತ್ತಾರೆ. ಎಚ್ಚರಿಕೆಯ ಸೈರನ್ ಮೊಳಗುತ್ತದೆ.
ತಕ್ಷಣವೇ ಅನಿಲ ಸೋರಿಕೆ ನಿಯಂತ್ರಣ ತಜ್ಞರು, ರಕ್ಷಣಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ, ಅಂಬುಲೈನ್ಸ್ ಹಾಗೂ ವೈದ್ಯಕೀಯ ತಂಡವೂ ಬರುತ್ತದೆ. ನಂತರ ಸಿಬ್ಬಂದಿ ಅನಿಲ ಸೋರಿಕೆಯಾದ ಸ್ಥಳ ಪರಿಶೀಲಿಸಿ ಅಸ್ವಸ್ಥಗೊಂಡ ಭದ್ರತಾ ಸಿಬ್ಬಂದಿಯನ್ನು ವೈದ್ಯಕೀಯ ತಂಡವರು ಪ್ರಥಮ ಚಿಕಿತ್ಸೆ ನೀಡಿ ಅಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ. ಹೀಗೆ ಭದ್ರತೆ, ರಕ್ಷಣೆ, ಅಗ್ನಿಶಾಮಕದಳ ಸಿಬ್ಬಂದಿಯ ಕಾರ್ಯಾರಣೆ ಹಂತ ಹಂತವಾಗಿ ನಡೆಯುತ್ತದೆ. ಬೆಳಿಗ್ಗೆ 10.40ಕ್ಕೆ ಆರಂಭವಾದ ಅಣಕು ಪ್ರದರ್ಶನವೂ 11.10 ರವರೆಗೆ ನಡೆಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸತ್ಯನಾರಾಯಣ, ಗೇಲ್ ಇಂಡಿಯಾ ಚಿತ್ರದುರ್ಗ ವಿಭಾಗದ ಡಿಜಿಎಂ ಮೊಹಂತಿ, ಹಿರಿಯ ವ್ಯವಸ್ಥಾಪಕ ರಮೇಶಬಾಬು, ಅಶೋಕ ಗ್ಯಾಸ್‍ನ ಸಂದೀಪ್ ಶರ್ಮಾ ಸೇರಿದಂತೆ ಗೇಲ್ ಇಂಡಿಯಾ ಸಿಬ್ಬಂದಿ ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗದ ಹೊಸಪೇಟೆ ರಸ್ತೆಯ ಜಿ.ಆರ್.ಹಳ್ಳಿ ಸಮೀಪದ ಗೇಲ್ ಇಂಡಿಯಾದ ಇಂಟರ್‍ಮಿಡಿಯೈಟ್ ಪಿಗ್ಗಿಂಗ್ ಸ್ಟೇಷನ್ ಆವರಣದಲ್ಲಿ ಬುಧವಾರ ನಡೆದ ನೈಸರ್ಗಿಕ ಅನಿಲ ಸೋರಿಕೆ ನಿರ್ವಹಣೆ ಕುರಿತಂತೆ ಅಣಕು ಕಾರ್ಯಾಚರಣೆಯನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವೀಕ್ಷಿಸಿದರು.

Share This Article
Leave a Comment

Leave a Reply

Your email address will not be published. Required fields are marked *