ಆಗಸ್ಟ್ 01 ರಂದು ಸರ್ಕಾರದ ವಿರುದ್ಧ ಶವಯಾತ್ರೆ : ಭಾಸ್ಕರ್ ಪ್ರಸಾದ್

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 03 : ಒಳ ಮೀಸಲಾತಿ ಜಾರಿಗೊಳಿಸದೆ ಸುಪ್ರಿಂಕೋರ್ಟ್ ಆದೇಶವನ್ನು ಧಿಕ್ಕರಿಸಿರುವ ರಾಜ್ಯ ಸರ್ಕಾರದ ವಿರುದ್ದ ಆ.1 ರಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಪ್ರತಿಮೆ ಮುಂಭಾಗ ಸರ್ಕಾರದ ಶವಯಾತ್ರೆ ನಡೆಸಿ ಸಾಮೂಹಿಕವಾಗಿ ಕೇಶಮುಂಡನ ಮಾಡಿಕೊಳ್ಳಲಾಗುವುದೆಂದು ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಆ.1 ಕ್ಕೆ ಒಂದು ವರ್ಷವಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿಯ ನೂರ ಒಂದು ಜಾತಿಗಳಿಗೆ ವಂಚನೆ ಮಾಡಿಕೊಂಡು ಬರುತ್ತಿದ್ದಾರೆ. ಅನಗತ್ಯ ಆಯೋಗ ರಚಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಹಾಗಾಗಿ ಆ.1 ರಿಂದ 30 ರೊಳಗೆ ಯಾವುದಾದರೂ ಒಂದು ದಿನಾಂಕ ನಿಗಧಿಪಡಿಸಿಕೊಂಡು ದೆಹಲಿ ಚಲೋ ಹಮ್ಮಿಕೊಂಡು ರಾಹುಲ್‍ಗಾಂಧಿ ನಿವಾಸಕ್ಕೆ ಮುತ್ತಿಗೆ ಹಾಕಿ ರಾಜ್ಯದಲ್ಲಿರುವ ನಿಮ್ಮ ಪಕ್ಷದ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಅರ್ಥ ಗೊತ್ತಿದೆಯೇ ಎಂದು ಪ್ರಶ್ನಿಸಲಾಗುವುದು. ಇದಲ್ಲದೆ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದೆಂದು ಹೇಳಿದರು.

ನೂರ ಒಂದು ಜಾತಿಗಳಿಗೂ ಸಂಜೀವಿನಿಯಾಗಿರುವ ಒಳ ಮೀಸಲಾತಿ ಜಾರಿಯಾಗಬೇಕು. ಅದಕ್ಕಾಗಿ ಎಲ್ಲಾ ಪಕ್ಷಗಳ ರಾಜಕೀಯ ನಾಯಕರುಗಳನ್ನು ಭೇಟಿ ಮಾಡುತ್ತೇವೆ. ವಿವಿಧ ಹೋರಾಟಗಾರರು, ಜನಪರ ಸಂಘಟನೆಗಳು, ಮಠಾಧೀಶರುಗಳು, ವಿವಿಧ ಜಾತಿಯ ಮುಖಂಡರುಗಳನ್ನು ಭೇಟಿಯಾಗಿ ಬೆಂಬಲ ಕೋರುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಯವಂಚಕತನ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನವರ ಕುತಂತ್ರದ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆಂದರು.
ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆಯ ಎಸ್.ಅರುಣ್‍ಕುಮಾರ್ ಮಾತನಾಡಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರಿಂಕೋರ್ಟ್ ತೀರ್ಪು ನೀಡಿ ಆ.1 ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗದಲ್ಲಿ ದತ್ತಾಂಶ ಕುರಿತು ಸಮಗ್ರ ಮಾಹಿತಿಯಿದೆ. ಕಾಂತರಾಜ್ ಆಯೋಗದಲ್ಲಿ ಮಾದಿಗರು, ಒಲೆಯರು ಎಂಬ ಪ್ರತ್ಯೇಕ ದತ್ತಾಂಶವಿದೆ. ಇಷ್ಟೆಲ್ಲಾ ಇದ್ದರು ಮಧ್ಯಂತರ ವರದಿ ಜಾರಿಗೊಳಿಸದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದಿಗರ ವಿರೋಧಿ ಸರ್ಕಾರ ಎನ್ನುವುದನ್ನು ಸಾಬೀತು ಪಡಿಸಿದ್ದಾರೆಂದು ಆಪಾದಿಸಿದರು.
ತೆಲಂಗಾಣ, ಆಂಧ್ರ, ಹರಿಯಾಣ, ತಮಿಳುನಾಡಿನಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಕರ್ನಾಟಕದಲ್ಲಿ ಇನ್ನು ಆಗಿಲ್ಲ. ನಾಗಮೋಹನ್‍ದಾಸ್ ಆಯೋಗ ಕಳೆದ ತಿಂಗಳ 5 ರಂದು ಮನೆ ಮನೆ ಸಮೀಕ್ಷೆ ಆರಂಭಿಸಿದೆ. ಒಳ ಮೀಸಲಾತಿ ಜಾರಿಯಾಗಬಾರದೆಂಬುದು ಹೊಸ ಷಡ್ಯಂತ್ರ. ಜಾರಿಯಾದರೂ ಗೊಂದಲವಿರಬೇಕೆಂಬುದು ಸರ್ಕಾರದ ಉದ್ದೇಶ. ಅದಕ್ಕಾಗಿ ಉಗ್ರ ಹೋರಾಟ ನಮ್ಮದು ಎಂದು ಹೇಳಿದರು.

ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟ ರಾಜೇಂದ್ರ ಎಲ್. ಮಾಳಪ್ಪ, ಶಿವಕುಮಾರ್ ಬೆಳ್ತೂರ್, ರಘುರಾಜ್‍ಕೊಳ್ಳಿ, ಎಂ.ಆರ್.ಸುಧೀಂದ್ರಕುಮಾರ್, ಸುರೇಶ್, ಸಿ.ಬಸವರಾಜ್, ರಘು, ಫಕೀರಪ್ಪ, ದಲಿತ ಮುಖಂಡ ಶಿವಣ್ಣ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks