ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಫೆ. 08): ನಗರದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಇದೇ ಫೆ.10 ರಿಂದ 12 ವರೆಗೆ 30ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಸ್ಥಳೀಯ ಕಲಾವಿದರ ಕೈಚಳಕ ಹಾಗೂ ಬಣ್ಣ ಬಣ್ಣದ ಹೂಗಳಲ್ಲಿ ಚಿತ್ರದುರ್ಗದ ಐತಿಹಾಸಿಕ ಗಾಳಿ ಗೋಪುರ ಮತ್ತು ಉಯ್ಯಾಲೆ ಕಂಬ, ಗಿಡ ಮರಗಳ, ಪ್ರಾಣಿ ಪಕ್ಷಿಗಳನ್ನು ಉಳಿಸಿ ರಕ್ಷಣೆ ಮಾಡುವ ಪರಿಕಲ್ಪನೆಯೊಂದಿಗೆ ಗಂಧದ ಗುಡಿ ಹಾಗೂ ಕಾಂತಾರ ಚಲನಚಿತ್ರದ ವಿವಿಧ ಕಲಾಕೃತಿಗಳು ಈ ಬಾರಿಯ ಜಿಲ್ಲಾ ಫಲ-ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿವೆ.
ಈ ಕುರಿತು ಇಲ್ಲಿನ ಜಿಲ್ಲಾ ತೋಟಗಾರಿಕಾ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಮಾಹಿತಿ ನೀಡಿದರು.
ಕೋವಿಡ್ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಫಲ-ಪುಷ್ಪ ಪ್ರದರ್ಶನಕ್ಕೆ ಮತ್ತೆ ಚಾಲನೆ ದೊರೆತಿದ್ದು, ‘ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳು, ಬೃಹತ್ ಹೂವಿನ ಗಿಡಗಳು, ಇಕೆಬಾನ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಜೊತೆಗೆ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದರು.
ತೋಟಗಾರಿಕೆಯಲ್ಲಿ ಯಶಸ್ಸು ಕಂಡ ರೈತರ ಯೋಶೋಗಾಥೆಯನ್ನು ತಿಳಿಸುವುದರ ಮೂಲಕ ಜಿಲ್ಲೆಯ ರೈತರಿಗೆ ತೋಟಗಾರಿಕೆ ಕೈಗೊಳ್ಳಲು ಪ್ರೇರಣೆ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚು ಮಾಡುವ ಉದ್ದೇಶ ಹೊಂದಲಾಗಿದೆ. ಇದರೊಂದಿಗೆ ತಾರಸಿ ತೋಟ, ಹಿತ್ತಲ ತೋಟ ಬೆಳಸಲು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಆದರ್ಶ ಸಂತ ಸಿದ್ದೇಶ್ವರ ಸ್ವಾಮೀಜಿ, ತರಕಾರಿ ಮನೆ ಹಾಗೂ ಹಳ್ಳಿಯ ಸೊಗಡು, ಮತದಾನ ಜಾಗೃತಿ ಕುರಿತು ಕಲಾಕೃತಿಗಳು ಸಹ ಫಲ-ಪುಷ್ಪ ಪ್ರದರ್ಶನದಲ್ಲಿರಲಿವೆ. ಇದರೊಂದಿಗೆ ಮಕ್ಕಳಿಗಾಗಿ ನೀತಿ ಕತೆ ಹಾಗೂ ಕಾರ್ಟೂನ್ ಕಲಾಕೃತಿಗಳನ್ನು ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ನಿರ್ಮಿಸಲಾಗುತ್ತಿದೆ. ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಆರ್ಕಿಡ್ಸ್, ಕಾರ್ನೇಶನ್, ಕಾಕ್ಸ್ ಕೂಂಬ್, ಸೆಲೋಶಿಯಾ, ಪ್ಲಾಕ್ಸ್, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್, ಇಂಪೇಷನ್ಸ್ (ಮಿಕ್ಸಡ್), ಡೇಲಿಯಾ (ಡ್ವಾರ್ಫ್), ಸಾಲ್ವಿಯಾ (ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ, ಪೆಟೂನಿಯಾ, ಕಾಸ್‍ಮಾಸ್, ಬಾಲ್ಸಂ, ಜಿರೇನಿಯಂ, ಹಾಲಿಹಾಕ್, ಆಂಟಿರಿನಮ್, ಡಯಾಂತಸ್, ಕ್ಯಾಲೊಂಡೋಲಾ, ಸೇವಂತಿಗೆ, ಪೆಂಟಾಸ್, ಫ್ಯಾನ್ಸಿ, ಇಪೋರ್ಬಿಯ ಮಿಲ್ಲಿ, ಫಾಯಿನ್‍ಸಿಟಿಯಾ, ಬಿಗೋನಿಯಾ, ವಿಂಕಾ, ಆಂತೋರಿಯಂ ಇತ್ಯಾದಿ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡಲಿವೆ ಎಂದರು.
ಹಣ್ಣು ಮತ್ತು ತರಕಾರಿ ತೆಂಗಿನ ಚಿಪ್ಪಿನ ಕೆತ್ತನೆಯ ಕಲಾಕೃತಿಗಳು ಪ್ರದರ್ಶನವೂ ಇರಲಿದ್ದು, ತೋಟಗಾರಿಕೆ ಇಲಾಖೆ ಯೋಜನಗಳ ಕುರಿತಾದ ಮಾಹಿತಿ ಸಹ ಫಲಪುಷ್ಪ ಪ್ರದರ್ಶನದಲ್ಲಿ ದೊರೆಯಲಿದೆ. ಪ್ರದರ್ಶನದ ಅಂಗವಾಗಿ ನಗರದ ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ದೆ, ಹಣ್ಣು ಮತ್ತು ಹೂ ತರಕಾರಿಗಳನ್ನು ಬಳಸಿ ಪ್ಯಾನ್ಸಿ ಡ್ರಸ್ಸ್ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ಧೆ, ತರಕಾರಿ ಕೆತ್ತನೆ, ಹೂ ಜೋಡಣೆ ಸ್ಪರ್ಧೆ, ಬೋನ್ಸಯ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ ಆಕರ್ಷಕ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತ, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಸುಜಯ್ ಶಿವಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜು ಇದ್ದರು.