ಪ್ರಧಾನಿಯಿಂದ ಜಿಲ್ಲಾಧಿಕಾರಿವರೆಗೂ ಎಲ್ಲರೂ ಜನ ಸೇವಕರೆ ವಿನಃ ದೊರೆಗಳಲ್ಲ : ಬಗಡಲಪುರ ನಾಗೇಂದ್ರ

3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 02 : ರೈತರ ಬದುಕು ಮತ್ತು ಪರಿಸರ ಉಳಿವಿನ ಪ್ರಶ್ನೆಯಾಗಿರುವುದರಿಂದ ಜೆ.ಎನ್.ಕೋಟೆ ಬಳಿ ಕೋಳಿ ಫಾರಂಗೆ ಅವಕಾಶ ನೀಡಬಾರದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಗಡಲಪುರ ನಾಗೇಂದ್ರ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಜೆ.ಎನ್.ಕೋಟೆ ಸಮೀಪ ಬೂತಪ್ಪನ ಮರ ಬಸ್‍ಸ್ಟಾಂಡ್ ಬಳಿ 40 ಎಕರೆ ಪ್ರದೇಶದಲ್ಲಿ ಆಂಧ್ರಪ್ರದೇಶದ ಉದ್ಯಮಿಯೊಬ್ಬರು ಕೋಳಿ ಫಾರಂ ನಡೆಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ನೀಡಿರುವುದನ್ನು ವಿರೋಧಿಸಿ ಜೆ.ಎನ್.ಕೋಟೆ ಹತ್ತಿರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರೈತರ ಹಕ್ಕೊತ್ತಾಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿಯಿಂದ ಹಿಡಿದು ಜಿಲ್ಲಾಧಿಕಾರಿ ಇವರುಗಳೆಲ್ಲಾ ಜನ ಸೇವಕರೆ ವಿನಃ ದೊರೆಗಳಲ್ಲ. ಕೋಳಿ ಫಾರಂಗೆ ಅನುಮತಿ ನೀಡಿರುವ ಪಿ.ಡಿ.ಓ. ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದ ಎದುರು ಮುಷ್ಕರ ನಡೆಸಲಾಗುವುದೆಂದು ಎಚ್ಚರಿಸಿದ ಬಗಡಲಪುರ ನಾಗೇಂದ್ರ ಇಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ಎಲ್ಲಾ ರೈತರು ಬದ್ದರಾಗಿರಬೇಕು. ರೈತ ಚಳುವಳಿಯಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ದಯನೀಯ ಸ್ಥಿತಿಯಲ್ಲಿ ಅಧಿಕಾರಿಗಳ ಮುಂದೆ ಕೈಮುಗಿದು ನಿಂತುಕೊಂಡರೆ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂದು ಹೇಳಿದರು.

ವಿಧಾನಸೌದದ ಮೂರನೆ ಮಹಡಿಯಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ರಾಜಕಾರಣಿಗಳು ರೈತರನ್ನು ಹಗುರವಾಗಿ ಕಾಣುತ್ತಿರುವುದರಿಂದ ಬೀದಿಗಿಳಿದು ಹೋರಾಡಬೇಕಿದೆ. ನಲವತ್ತು ಎಕರೆ ಜಮೀನನ್ನು ಕೃಷಿಕನಷ್ಟೆ ಕೊಳ್ಳಬೇಕೆಂಬ ನಿಯಮವಿತ್ತು. ಸರ್ಕಾರ ತಿದ್ದುಪಡಿ ತಂದು ಕೃಷಿಕನಲ್ಲದವನು ಭೂಮಿಯನ್ನು ಕೊಂಡುಕೊಳ್ಳಬಹುದೆಂಬ ಕಾಯಿದೆ ಜಾರಿಗೆ ತಂದಿರುವುದರಿಂದ ಆಂಧ್ರದ ಉದ್ಯಮಿಯೊಬ್ಬರಿಗೆ ಕೋಳಿ ಫಾರಂ ನಡೆಸಲು ಅನುಮತಿ ನೀಡಿ ರೈತರಿಗೆ ದ್ರೋಹವೆಸಗುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಯಾವುದೇ ಕಾರಣಕ್ಕೂ ಸುತ್ತಮುತ್ತಲಿನ ಎಂಟು ಹಳ್ಳಿಗಳ ರೈತರಿಗೆ ಜನಸಾಮಾನ್ಯರಿಗೆ ಹಾಗೂ ಪರಿಸರಕ್ಕೆ ಹಾನಿಯಾಗಬಾರದೆಂದರೆ ಕೋಳಿ ಫಾರಂಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕೆಂದರು.

ಕೋಳಿ ಫಾರಂನಿಂದ ನೊಣಗಳ ಹಾವಳಿ ಜಾಸ್ತಿಯಾಗಿ ದುರ್ವಾಸನೆ ಬೀರುತ್ತದೆ. ಹಸಿರು ಟವಲ್‍ಗೆ ತ್ಯಾಗ ಬಲಿದಾನದ ಇತಿಹಾಸವಿದೆ. ಹೆಗಲ ಮೇಲೆ ಟವಲ್ ಇದ್ದರೆ ಶಕ್ತಿ ಬರುತ್ತದೆ. ಮುಂದಿನ ದಿನಗಳಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರನ್ನು ಸರ್ಕಾರ ಅಳವಡಿಸಲು ಹೊರಟಿದೆ. ಇದರ ವಿರುದ್ದ ದೊಡ್ಡ ಚಳುವಳಿಗೆ ರೈತರು ಸಿದ್ದರಾಗಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ಜೆ.ಎನ್.ಕೋಟೆ ಸಮೀಪ ಯಾವುದೇ ಕಾರಣಕ್ಕೂ ಆಂಧ್ರದ ಉದ್ಯಮಿ ಕೋಳಿ ಫಾರಂ ನಡೆಸಲು ನಾವುಗಳು ಅವಕಾಶ ಕೊಡುವುದಿಲ್ಲ. ಇದರಿಂದ ರೈತರ ಬದುಕಿನ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಆರೋಗ್ಯ ಹದಗೆಡುತ್ತದೆ. ಹಾಗಾಗಿ ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪಿ.ಡಿ.ಓ. ಮೇಲೆ ಶಿಸ್ತು ಕ್ರಮ ಜರುಗಿಸಿ ಕೋಳಿ ಫಾರಂಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡುತ್ತ ಕುಕ್ಕಟೋದ್ಯಮಕ್ಕೆ ನಾವುಗಳ್ಯಾರು ವಿರೋಧಿಗಳಲ್ಲ. ಆದರೆ ಕೋಳಿ ಫಾರಂನಿಂದಾಗುವ ಅನಾಹುತವನ್ನು ಸಹಿಸುವುದಿಲ್ಲ. ಮಳೆಗಾಲ ಬಂತೆಂದರೆ ಕೋಳಿ ಫಾರಂನಿಂದ ಹೊರಬರುವ ತ್ಯಾಜ್ಯಗಳು ಹರಿದು ಕೆರೆಗೆ ಸೇರುವುದರಿಂದ ಇಡಿ ಕೆರೆ ನೀರು ಕಲುಷಿತಗೊಳ್ಳುವುದಲ್ಲದೆ ಜಲಚರಗಳು ಸಾವನ್ನಪ್ಪುತ್ತವೆ. ಇವೆಲ್ಲಕ್ಕೂ ಮುಖ್ಯವಾಗಿ ರೈತರ ಬೆಳೆಗಳಿಗೆ ಹಾನಿಯಾಗುವುದಲ್ಲದೆ ಆರೋಗ್ಯದ ಮೇಲೆ

ದುಷ್ಪರಿಣಾಮ ಬೀರುವುದನ್ನು ತಡೆಯಬೇಕಾಗಿರುವುದರಿಂದ ಕೋಳಿ ಫಾರಂಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ
ಕಾರ್ಯದರ್ಶಿ ಎನ್.ಡಿ.ವಸಂತಕುಮಾರ್, ರಾಜ್ಯ ವಲಯ ಉಪಾಧ್ಯಕ್ಷ ಹೊರಕೇರಪ್ಪ, ಜಿಲ್ಲಾ ಗೌರವಾಧ್ಯಕ್ಷ ತಿಪ್ಪೇಸ್ವಾಮಿ ಮಲ್ಲಾಪುರ, ಡಿ.ಎಸ್.ಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ರೈತ ಸಂಘದ ಜಿಲ್ಲಾ ಸಂಚಾಲಕಿ ಸುಧಾ, ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗಮ್ಮ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.

ಜೆ.ಎನ್.ಕೋಟೆ, ನರೇನಹಾಳು, ಕಸವನಹಳ್ಳಿ, ಸಜ್ಜನಕೆರೆ, ಕಳ್ಳಿರೊಪ್ಪ, ಗೊಲ್ಲನಕಟ್ಟೆ, ಪಲ್ಲವಗೆರೆ, ಜೋಡಿ ಚಿಕ್ಕೇನಹಳ್ಳಿ, ಗೊಲ್ಲರಹಟ್ಟಿ, ಲಂಬಾಣಿಹಟ್ಟಿ, ಎಣ್ಣೆಗೆರೆ ಓರಗುಂಟರಮಾಳಿಗೆ, ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ರೈತರು ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *