ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಜನರಲ್ಲಿ ಒಂದು ಟ್ರೆಂಡಿಂಗ್ ಹುಟ್ಟಿಕೊಂಡು ಬಿಟ್ಟಿದೆ. ಅನಾಥ ಆಶ್ರಮ, ಸರ್ಕಾರಿ ಶಾಲೆಗಳು ಹೀಗೆ ಕೆಲವು ಕಡೆಗೆ ಹೋಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರುವುದು. ಅಲ್ಲಿ ಕೇಕ್ ಕಟ್ ಮಾಡಿ ಮಕ್ಕಳಿಗೆ ಹಂಚುವುದು. ಆದರೆ ಇದು ಮಕ್ಕಳ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಬಹುದು ಎಂಬ ಅಂದಾಜು ಇರುವುದಿಲ್ಲ. ಈ ರೀತಿ ಮಾನಸಿಕ ಹಿಂಸೆ ಮಕ್ಕಳಿಗೆ ಆಗದಂತೆ ತಡೆಯಲು ಸರ್ಕಾರ ಒಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಇನ್ಮುಂದೆ ಯಾರು ಕೂಡ ಸರ್ಕಾರಿ ಶಾಲೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವಂತೆ ಇಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು, ಸೆಲೆಬ್ರೆಟಿಗಳು ಗಣ್ಯ ವ್ಯಕ್ತಿಗಳು ಹಾಗೂ ಅವರ ಮಕ್ಕಳ ಹುಟ್ಟುಹಬ್ಬವನ್ನು ಆಚರಣೆ ಮಾಡದಂತೆ ನಿಷೇಧಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಈ ಸುತ್ತೋಲೆ ಹೊರಡಿಸಿರುವ ಉದ್ದೇಶವೇ ಬೇರೆ ಆಗಿದೆ. ಮಕ್ಕಳ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವುದಕ್ಕೆ ಈ ರೀತಿಯ ಆದೇಶ ಹೊರಡಿಸಿದೆ. ಎಷ್ಟೋ ಮಕ್ಕಳ ಮನೆಯಲ್ಲಿ ಅನುಕೂಲವಿರುವುದಿಲ್ಲ. ಹುಟ್ಟುಹಬ್ಬವನ್ನು ಆಚರಣೆ ಮಾಡುವುದಿಲ್ಲ. ಆದರೆ ಹೀಗೆ ಗಣ್ಯ ವ್ಯಕ್ತಿಗಳು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಆಚರಣೆ ಮಾಡಿದರೆ ಮಕ್ಕಳಿಗೆ ಮನಸ್ಸಿಗೆ ನೋವಾಗುತ್ತದೆ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅದನ್ನು ನೋಯಿಸಬಾರದು ಎಂದು ಇಲಾಖೆ ಈ ರೀತಿಯ ಸುತ್ತೋಲೆಯನ್ನು ಹೊರಡಿಸಿದೆ. ಸರ್ಕಾರಿ ಸ್ವಾಮ್ಯದ ಶಾಲೆಯಲ್ಲಿ ಯಾರೂ ಕೂಡ ಕೇಕ್ ತರಿಸಿ ಕಟ್ ಮಾಡಿಸಬಾರದು ಎಂದು ಸೂಚನೆ ನೀಡಿದೆ.