ಚಿತ್ರದುರ್ಗ(ಜ.27) : ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಹೊರಕೇರಿದೇವರಪುರದಲ್ಲಿ ಫೆ. 06 ರಿಂದ 08 ರವರೆಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಗುಂಡಿನಸೇವಾ ಮತ್ತು ಅನ್ನದಕೋಟೆ ಮಹೋತ್ಸವ ಆಚರಣೆ ನಿಮಿತ್ಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಫೆಬ್ರವರಿ. 06 ರಿಂದ 07 ರವರೆಗೆ ಶ್ರೀ ಸ್ವಾಮಿಯ ಮೂಲ ನೆಲೆಯಾದ ಕೃಷ್ಣಾಚಲ ಮತ್ತು ದೇವಸ್ಥಾನದ ಮುಂದಿನ ವೈಕುಂಠ ಮಂಟಪದಲ್ಲಿ ಪಂಚರಾತ್ರಾಗಮ ಪ್ರಕಾರ ಲೋಕಕಲ್ಯಾಣಾರ್ಥವಾಗಿ ಗುಂಡಿನ ಸೇವೆ ಮತ್ತು ಅನ್ನದಕೋಟೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.
ಈ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ವಿವಿಧ ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳುವರು.
ಫೆ. 06 ರಂದು ಬೆಳಿಗ್ಗೆ ದೇವಾಲಯದಲ್ಲಿ ಮಹಾಭಿಷೇಕ, ಮ. 3 ಗಂಟೆಗೆ ಸ್ವಾಮಿಯ ಕೃಷ್ಣಾಚಲ (ಕರೇಕಲ್ಲು) ಬೆಟ್ಟಕ್ಕೆ ತೆರಳುವುದು, ಸಂಜೆ 04 ಗಂಟೆಯಿಂದ ಆಹ್ವಾನಿತ ದೇವರುಗಳನ್ನು ಗ್ರಾಮದೇವತೆಗಳಾದ ದೊಡ್ಡ ಕರಿಯಮ್ಮದೇವಿ ಮತ್ತು ಸಣ್ಣ ಕರಿಯಮ್ಮ ದೇವಿಯವರಿಂದ ವೈಕುಂಠ ಮಂಟಪಕ್ಕೆ ಆಹ್ವಾನಿಸುವ ಕಾರ್ಯಕ್ರಮ ಜರುಗಲಿದೆ.
ಅದೇ ರೀತಿ ಫೆ. 07 ರಂದು ಬೆಳಿಗ್ಗೆ 8 ರಿಂದ ಸ್ವಾಮಿಯ ದಿವ್ಯಸನ್ನಿಧಿ ಮತ್ತು ಎಲ್ಲ ದೇವರುಗಳ ಸಮ್ಮುಖದಲ್ಲಿ ಮಹಾ ಮಂಗಳಾರತಿ, ಹೋಮ ನೆರವೇರಲಿದ್ದು, ಶ್ರೀಸ್ವಾಮಿಯ ಹೂವಿನ ಹಾರವನ್ನು ಬಳಿಕ ಹರಾಜು ಮಾಡಲಾಗುತ್ತದೆ. ಬೆಳಿಗ್ಗೆ 10.30 ರಿಂದ 11 ಗಂಟೆಗೆ ವೈಕುಂಠ ಮಂಟಪದಲ್ಲಿ ಅನ್ನದಕೋಟೆ ಕಾರ್ಯಕ್ರಮದ ಮಹಾ ಮಂಗಳಾರತಿ ಮತ್ತು ಆಹ್ವಾನಿತ ದೇವರುಗಳಿಗೆ ನೈವೇದ್ಯ ಮತ್ತು ಮಹಾಮಂಗಳಾರತಿ ಪ್ರಸಾದ ವಿನಿಯೋಗ ಜರುಗುವುದು.
ಫೆ. 08 ರಂದು ಸಂಜೆ 4 ಗಂಟೆಗೆ ಅನ್ನದ ಕೋಟೆಯು ನಡೆದ ಮಂಟಪದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಗ್ರಾಮದೇವತೆ ಕರಿಯಮ್ಮ ದೇವರುಗಳಿಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಂದ ಮಹಾಪೂಜೆ ಹಾಗೂ ಪಟ್ಟದ ದಾಸಯ್ಯ ಮತ್ತಿತರರಿಗೆ ಗೌರವ ಸಮರ್ಪಣೆ ಜರುಗಲಿದೆ.
ಫೆ. 06 ರಂದು ಸಂಜೆ 4 ಗಂಟೆಯಿಂದ ರಾತ್ರಿ 10 ರವರೆಗೆ ಎಲ್ಲ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಫೆ. 07 ರಂದು ಬೆಳಿಗ್ಗೆ 7 ಗಂಟೆಗೆ ಲಘು ಉಪಹಾರ, ಮಧ್ಯಾಹ್ನ 01 ರ ನಂತರ ನಿರಂತರ ಊಟದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.