ವಿಜಯಪುರ: ಬೆಳಗಾವಿಯಲ್ಲಿ ಮರಾಠಿಗರು ಕನ್ನಡಿಗರ ಮೇಲೆ ದಾಳಿ ನಡೆಸುತ್ತಲೇ ಇರುತ್ತಾರೆ. ಇದೀಗ ವಿಜಯಪುರದ ಶ್ರೀಶೈಲದಲ್ಲೂ ಕನ್ನಡಿಗರನ್ನು ಗುರಿ ಮಾಡಿ, ಹಲ್ಲೆ ನಡೆಸುವುದಕ್ಕೆ ಆರಂಭಿಸಿದ್ದಾರೆ. ಕಳೆದ ಯುಗಾದಿ ಹಬ್ಬದ ಸಂಭ್ರಮದಲ್ಲೂ ಕನ್ನಡಿಗರ ಮೇಲೆ ಹಲ್ಲೆ ನಡೆಸಿ, ಕರ್ನಾಟಕದ ವಾಹನದ ಗಾಜು ಪುಡಿ ಪುಡಿ ಮಾಡಿದ್ದರು. ಇದೀಗ ಅಂಥ ಘಟನೆ ಪುನಃ ಮರುಕಳಿಸಿದೆ.
ಶ್ರೈಶೈಲದಲ್ಲಿ ವಿಜಯಪುರ ಡಿಪೋಗೆ ಸೇರಿದ ಬಸ್ ಮೇಲೆ ದಾಳಿ ನಡೆಸಿದ್ದಾರೆ. ಸರ್ಕಾರಿ ಬಸ್ ನ ಚಾಲಕ ಕಂ ನಿರ್ವಾಹಕ ಬಸವರಾಜ್ ಬಿರಾದರ್ ರಾತ್ರಿ ಊಟ ಮುಗಿಸಿ, ಬಸ್ ನಿಲ್ದಾಣದಲ್ಲಿಯ ಕಟ್ಟೆ ಮೇಲೆ ಹಾಗೇ ಮಲಗಿದ್ದರಂತೆ. ಅಲ್ಲಿಗೆ ಬಂದ ಪುಂಡರು ಏಕಾಏಕಿ ದಾಳಿ ನಡೆಸಿದ್ದಾರೆ. ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಸವರಾಜ್ ಚೀರಾಟ ಕೇಳಿಸಿಕೊಂಡ ಬೇರೆ ಚಾಲಕ, ನಿರ್ವಾಕರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಜನ ಬರುತ್ತಿದ್ದಂತೆ, ಪುಂಡರು ಕಾಲ್ಕಿತ್ತಿದ್ದಾರೆ.
ಅಷ್ಟೊತ್ತಿಗೆ ಬಸವರಾಜ್ ಬಿರಾದರ್ ಗೆ ಮುಖ, ಕಾಲಿನ ಭಾಗಕ್ಕೆ ಹೆಚ್ಚು ಗಾಯವಾಗಿದೆ. ರಕ್ತಸ್ರಾವ ಜಾಸ್ತಿಯಾಗಿತ್ತಂತೆ. 10-12 ಜನ ಬಸವರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡಿಗರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ಸದ್ಯ ಘಟನೆ ಸಂಬಂಧ ಶ್ರೀಶೈಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಸವರಾಜ್ ಬಿರಾದರ್ ಗೆ ಜೊತೆಗಾರರೆಲ್ಲಾ ಸೇರಿ ಚಿಕಿತ್ಸೆ ಕೊಡಿಸಿದ್ದಾರೆ.