ಸುದ್ದಿಒನ್, ಚಿತ್ರದುರ್ಗ : ಇಂಗ್ಲಿಷ್ ಭಾಷೆಗೆ ವಿಶ್ವವನ್ನು ಒಗ್ಗೂಡಿಸುವ ಶಕ್ತಿಯಿದೆ. ಯಾವುದೇ ಭಾಷೆಯನ್ನು ಕಲಿಯಲು ಮಡಿವಂತಿಕೆ ಎಂಬುದು ಇರುವುದಿಲ್ಲ. ಜಗತ್ತಿನ ಯಾವ ಭಾಷೆಯನ್ನೂ ಸಹ ಶ್ರೇಷ್ಠ-ಕನಿಷ್ಠ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯಾವುದೇ ಭಾಷೆಗೆ ಹೋಲಿಸಿದರೆ ಮಾತೃಭಾಷೆ ಸಹಜವಾಗಿ ಮೇಲುಗೈ ಸಾಧಿಸುತ್ತದೆ. ಆದರೆ ಇಂಗ್ಲಿಷ್ ತನ್ನ ವಿಶಿಷ್ಟ ಗುಣಗಳಿಂದಾಗಿ ವಿಶ್ವದ ಆಕರ್ಷಣೀಯ ಭಾಷೆಯಾಗಿ ಬೆಳೆದಿದೆ ಎಂದು ಉಪನ್ಯಾಸಕ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ನಗರದ ವಿದ್ಯಾನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ (ರಿ.) ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಇಂಗ್ಲಿಷ್ ಕಾರ್ಯಾಗಾರವನ್ನು ಕುರಿತು ಅವರು ಮಾತನಾಡಿದರು.
ಡಿಜಿಟಲ್ ಇಂಡಿಯಾದಂತಹ ಪರಿಕಲ್ಪನೆಯೊಂದಿಗೆ ಮುನ್ನುಗ್ಗುತ್ತಿರುವ ನಮ್ಮ ದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿರುವುದರ ಜೊತೆಗೆ ಕೀಳರಿಮೆಯ ಮನೋಭಾವವನ್ನು ಸೃಷ್ಠಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಷ್ಟೇ ಅಲ್ಲದೆ ನಗರ ಪ್ರದೇಶಗಳ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಸಹ ಇಂಗ್ಲಿಷ್ ಕಲಿಕೆಯ ಕಠಿಣ ಸವಾಲುಗಳನ್ನು ಎದುರಿಸವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಸ್ವಾಗತಾರ್ಹವಾಗಿದ್ದು, ಸಮಾಜದ ಶಿಕ್ಷಣ ತಜ್ಞರು, ಉತ್ಸಾಹಿ ಯುವಕರು ಶಿಕ್ಷಕರ ಜೊತೆ ಕೈಜೊಡಿಸಬೇಕಿದೆ. ಕನ್ನಡ ಭಾಷೆಯು ಪ್ರೀತಿ, ಆದರಗಳನ್ನು ಕಲಿಸಿಕೊಟ್ಟರೆ, ಇತರ ಭಾಷೆಗಳು ಜ್ಞಾನವನ್ನು ಹೆಚ್ಚಿಸಬಲ್ಲವು ಎಂದು ತಿಳಿಸಿದರು.
ಜ್ಞಾನದ ಹಸಿವು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಮಾತೃಭಾಷೆ ಸಂಸ್ಕøತಿಯನ್ನು ಕಲಿಸಿದರೆ, ಇಂಗ್ಲಿಷ್ ಭಾಷಾ ಜ್ಞಾನ ಸ್ವತಂತ್ರವಾಗಿ ಬದುಕುವ ಕಲೆಯನ್ನು ವೃದ್ಧಿಸುತ್ತದೆ. ತಂತ್ರಜ್ಞಾನದ ಮೇರುಯುಗದಲ್ಲಿರುವ ನಮಗೆ ಇಂಗ್ಲಿಷ್ ಭಾಷೆಯ ಅರಿವು ಆತ್ಮಸ್ಥೆರ್ಯ ತುಂಬಲು ಸಹಕಾರಿಯಾಗಿದೆ ಎಂದ ಅವರು ಇಂಗ್ಲಿಷ್ ಬಳಕೆಯ ಕೊರತೆಯಿಂದಾಗಿ ಲಕ್ಷಾಂತರ ಯುವಕರು ನಮ್ಮ ದೇಶದಲ್ಲಿ ವಿದ್ಯಾರ್ಹತೆಯಿದ್ದರೂ ಉತ್ತಮ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಲೇಖಕ ಯೋಗೀಶ್ ಸಹ್ಯಾದ್ರಿ ವಿಷಾದ ವ್ಯಕ್ತ ಪಡಿಸಿದರು.
ಅಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಯುವಕರು ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಹಾಗೂ ಸುಲಲಿತವಾಗಿ ತಮ್ಮ ವಿಚಾರಧಾರೆಗಳನ್ನು ಮಂಡಿಸುವಷ್ಟು ಸದೃಢರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರತಾಪ್ ರೆಡ್ಡಿ ಪ್ರತಿಯೊಂದು ಭಾಷೆಯೂ ಒಂದು ವಿಶಿಷ್ಠವಾದ ಸಂಪತ್ತು ಇದ್ದ ಹಾಗೆ ಅಲ್ಲದೆ ಇಂಗ್ಲಿಷ್‍ಗೆ ಜೀವನ ರೂಪಿಸಿಕೊಡುವ ಶಕ್ತಿ ಇದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಇಂಗ್ಲಿಷ್ ವಿಷಯವನ್ನು ಕುರಿತು ಕೀಳರಿಮೆ ಬೆಳೆಸಿಕೊಳ್ಳಬಾರದು. ಯಾವುದೇ ಭಾಷೆಯನ್ನು ಕಲಿಯಲು ತಾರತಮ್ಯ ಸಲ್ಲದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯೋಗೀಶ್ ಸಹ್ಯಾದ್ರಿಯವರ ಇಂತಹ ವಿದ್ಯಾರ್ಥಿ ಸ್ನೇಹಿ ಯೋಜನೆ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿರುವುದಲ್ಲದೇ ಯುವ ಶಿಕ್ಷಕರುಗಳಿಗೂ ಸ್ಪೂರ್ತಿದಾಯಕವಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸಿಕೊಡುವುದರ ಜೊತೆಗೆ ಅವರಲ್ಲಿರುವ ಕೀಳರಿಮೆಯ ಮನೋಭಾವವನ್ನು ಹೋಗಲಾಡಿಸುವ ದಿಟ್ಟ ಪ್ರಯತ್ನವನ್ನು ಮಾಡುತ್ತಿರುವ ಸಂಸ್ಥೆಯ ಯೋಜನೆಗಳು ಫಲಕಾರಿಯಾಗಲಿ ಎಂದು ಆಶಿಸಿದರು.
ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಮಾತನಾಡಿ ಎಲ್ಲ ಭಾಷೆಗಳು ಕಲಿಯಲು ಸುಲಭ. ಆದರೆ ಕಲಿಯುವ ಹುಮ್ಮಸ್ಸು ಇರಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿ ಅಸಾಮಾನ್ಯ ಸಾಧನೆ ಮಾಡಿರುವ ಅಸಂಖ್ಯಾತ ಉದಾಹರಣೆಗಳಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದ ಅವರು ಯೋಗೀಶ್ ಸಹ್ಯಾದ್ರಿಯವರಂತಹ ಯುವ ಚೇತನಗಳ ಅವಶ್ಯಕತೆ ಸಮಾಜಕ್ಕೆ ಬಹಳಷ್ಟಿದೆ. ಸಹ್ಯಾದ್ರಿಯವರ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸುವ ಕಾರ್ಯ ಇತರರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನೀಲವೇಣಿ ಟಿ.ವಿ, ರಾಧಾಬಾಯಿ ಎಂ.ಜಿ, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.