ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಶ್ರವಣ ಸಾಧನ ಉಚಿತ ವಿತರಣೆ

suddionenews
1 Min Read

ಚಿತ್ರದುರ್ಗ ಫೆ. 08 : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಶ್ರವಣ ನ್ಯೂನತೆ ಅನುಭವಿಸುತ್ತಿದ್ದ 19 ಜನರಿಗೆ ಉಚಿತವಾಗಿ ಶ್ರವಣ ಸಾಧನ ವಿತರಿಸಲಾಯಿತು.

 

ನಗರದ ರೋಟರಿ ಬಾಲ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಒಟ್ಟು 19 ಜನರಿಗೆ ಉಚಿತವಾಗಿ ಶ್ರವಣ ಸಾಧನವನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ದೇಶಾದ್ಯಂತ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದೆ.  ರಕ್ತದಾನ ಶಿಬಿರ, ವಿಕಲಚೇತನರಿಗೆ ಉಚಿತವಾಗಿ ಗಾಲಿಕುರ್ಚಿ ಸೇರಿದಂತೆ ಹಲವಾರು ಸಾಧನ ಸಲಕರಣೆಗಳನ್ನು ವಿತರಿಸುವ ಮೂಲಕ ವಿಕಲಚೇತನರ ಬಾಳಿಗೆ ಬೆಳಕು ನೀಡುವಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ.  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚಿತ್ರದುರ್ಗ ಜಿಲ್ಲಾ ಶಾಖೆಯ ವತಿಯಿಂದ ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಶಾಖೆಯ ಖಜಾಂಚಿ ಎಸ್. ವೀರೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿದೆ.  ವಿತರಣೆ ಮಾಡಲಾಗುತ್ತಿರುವ ಶ್ರವಣ ಸಾಧನವು ಆಧುನಿಕ ತಂತ್ರಜ್ಞಾನ ಹೊಂದಿದು, ಉತ್ತಮ ಗುಣಮಟ್ಟವನ್ನು ಹೊಂದಿದೆ. ವಿಕಲಚೇತನರ ಬಾಳು ಹಸನಾಗಿಸಲು ಸಾಧ್ಯವಾದ ಮಟ್ಟಿಗೆ ಸಂಸ್ಥೆಯಿಂದ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯ ಮಾಡಲಾಗುತ್ತಿದೆ.  ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಸಭಾಪತಿ ಈ. ಅರುಣ್‍ಕುಮಾರ್, ಕಾರ್ಯದರ್ಶಿ ಮಜಹರ್ ಉಲ್ಲಾ ಎನ್., ನಿರ್ದೇಶಕರುಗಳಾದ ಅನಂತರೆಡ್ಡಿ, ಶ್ರೀನಿವಾಸ್, ಗುರುಮೂರ್ತಿ, ಸುರೇಶ್, ಮಹಮ್ಮದ್ ಅಲಿ, ನವೀನ್ ಮಸ್ಕಲ್ ಮುಂತಾದವರು ಭಾಗವಹಿಸಿದ್ದರು.

ಸಾರ್ವಜನಿಕರಿಗೆ ವಿತರಣೆ ಮಾಡಲಾದ ಶ್ರವಣ ಸಾಧನವನ್ನು ಬಳಸುವ ರೀತಿ ಕುರಿತಂತೆ ರಜನಿಕಾಂತ್ ಅವರು ಇದೇ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *