ಜುಲೈ 20 ರಿಂದ ಸೆಪ್ಟೆಂಬರ್ 30 ರವರೆಗೆ ಜಿಲ್ಲೆಯಾದ್ಯಂತ ಉಚಿತ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ : ಡಾ.ಆರ್.ರಂಗನಾಥ್

2 Min Read

ಚಿತ್ರದುರ್ಗ,(ಜುಲೈ.19) : ಜಿಲ್ಲೆಯಲ್ಲಿ ಕೋವಿಡ್-19 ಮೊದಲ ಡೋಸ್ ಮತ್ತು ಎರಡನೇ ಡೋಸ್ ಲಸಿಕೆ ಶೇ.100 ಗುರಿ ಸಾಧಿಸಲಾಗಿದ್ದು, ಸಂಭಾವ್ಯ ನಾಲ್ಕನೇ ಅಲೆಯ ತೀವ್ರತೆ ತಗ್ಗಿಸಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಬೂಸ್ಟರ್ ಲಸಿಕೆ (ಮುನ್ನಚ್ಚರಿಕಾ ಕೋವಿಡ್ ಲಸಿಕೆ) ನೀಡುವ ಕಾರ್ಯಕ್ರಮ ಜುಲೈ 20 ರಿಂದ ಜಿಲ್ಲೆಯಾದ್ಯಂತ ಆರಂಭವಾಗಲಿದೆ.

ಜುಲೈ 15 ರಿಂದ ಸೆಪ್ಟೆಂಬರ್ 30 ರವರೆಗೆ ರಾಜ್ಯಾದ್ಯಂತ 18 ರಿಂದ 59 ವರ್ಷ ವಯಸ್ಸಿನ ಫಲಾನುಭವಿಗಳಿಗೆ ಕೋವಿಡ್ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಜುಲೈ 20 ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ, 2ನೇ ಡೋಸ್ ಲಸಿಕೆ ಪಡೆದು 6 ತಿಂಗಳು ದಾಟಿದ ಸಾರ್ವಜನಿಕರಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳ ಲಸಿಕಾ ಕೇಂದ್ರಗಳಲ್ಲಿ ಉಚಿತ ಲಸಿಕೆ ಹಾಕಲಾಗುವುದು. ಈ ಮೂಲಕ ಕೋವಿಡ್ ಲಸಿಕಾಕರಣ ಅಮೃತ ಮಹೋತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕಿದೆ.

ಕೋವಿಡ್-19 ಲಸಿಕಾಕರಣವನ್ನು ಪ್ರಾರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ, 60 ವರ್ಷ ಮೇಲ್ಪಟ್ಟವರಿಗೆ ಹಾಗೂ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತೆಯರಿಗೆ ಕೋವಿಡ್ ಲಸಿಕೆ ನೀಡಲಾಯಿತು. ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿಕೆ ಪ್ರಾರಂಭಿಸಲಾಯಿತು.

6,72,467 ಮಂದಿಗೆ ಬೂಸ್ಟರ್ ಲಸಿಕೆ ಗುರಿ: ಈಗಾಗಲೇ 18 ವರ್ಷ ಮೇಲ್ಪಟ್ಟ 12,82,002 ಫಲಾನುಭವಿಗಳು ಮೊದಲ ಡೋಸ್ ಲಸಿಕೆ ಪಡೆದು ಶೇ ಲಸಿಕೆ ಶೇ.102.56, ಹಾಗೂ 12,85,933 ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆದಿದ್ದು,  ಶೇ.102.87 ಸಾಧನೆಯಾಗಿದೆ. ಜಿಲ್ಲೆಯಲ್ಲಿ 18 ರಿಂದ 59 ವರ್ಷ ವಯಸ್ಸಿನ 10,01,437 ಫಲಾನುಭವಿಗಳು ಇದ್ದು, ಇದರಲ್ಲಿ ಜುಲೈ 16ಕ್ಕೆ ಎರಡನೇ ಡೋಸ್ ಲಸಿಕೆ ಪಡೆದು 6 ತಿಂಗಳು ಮುಗಿದಿರುವ ಒಟ್ಟು 6,72,467 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಜುಲೈ 20ರಂದು ಉಚಿತ ಬೂಸ್ಟರ್ ಲಸಿಕೆಗೆ ಚಾಲನೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಇದೇ ಜುಲೈ 20 ರಂದು ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ 18 ರಿಂದ 59 ವರ್ಷದೊಳಗಿನವರಿಗೆ ಉಚಿತ ಬೂಸ್ಟರ್ ಲಸಿಕೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಲಸಿಕಾ ಕೇಂದ್ರಗಳು: 1 ಜಿಲ್ಲಾಸ್ಪತ್ರೆ, 5 ಸಾರ್ವಜನಿಕ ಆಸ್ಪತ್ರೆ, 11 ಸಮುದಾಯ ಆರೋಗ್ಯ ಕೇಂದ್ರಗಳು, 81 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5 ನಗರ ಆರೋಗ್ಯ ಕೇಂದ್ರಗಳು, 343 ಉಪಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್ ಬೂಸ್ಟರ್ ಲಸಿಕೆಯನ್ನು ನೀಡಲಾಗುತ್ತದೆ.

18 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಲಸಿಕೆ ಪಡೆದು ಆರು ತಿಂಗಳು ಪೂರೈಸಿರುವ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲು ಅರ್ಹರಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ, ಅಂಗನವಾಡಿಗಳಲ್ಲಿ ಉಚಿತವಾಗಿ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *