Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ : ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ

Facebook
Twitter
Telegram
WhatsApp

 

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜೂನ್.11) : ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಚಿತ್ರದುರ್ಗ ನಗರದ ಕೇಂದ್ರೀಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾದ “ಶಕ್ತಿ” ಯೋಜನೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಇಂದು ಜಿಲ್ಲೆಯಲ್ಲಿ ಎಲ್ಲರೂ ಸಂಭ್ರಮಿಸುವ ದಿನವಾಗಿದೆ.  ರಾಜ್ಯ ವಿಧಾನ ಸಭಾ ಚುನಾವಣೆ ಸಮಯದಲ್ಲಿ ನಮ್ಮ ಪಕ್ಷ ನೀಡಿದ ಭರವಸೆಗಳಲ್ಲಿ ಪೈಕಿ ಮೊದಲನೇ ಭರವಸೆಯನ್ನು  ಸರ್ಕಾರ ರಚನೆಯಾದ ತಿಂಗಳ ಒಳಗಾಗಿ ಈಡೇರಿಸಲಾಗಿದೆ. ನಮ್ಮ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆ ಜಾರಿಗೊಳಿಸಿದ್ದು ನಮ್ಮೆಲ್ಲರಿಗೂ ಹೆಮ್ಮಯ ದಿನವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ 2013 ರಲ್ಲೂ ಅಧಿಕಾರಕ್ಕೆ ಬಂದಾಗ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲಾ ಭರವಸೆಗಳನ್ನು ಈಡೇರಿಸಿತ್ತು.

ಜನರ ಶ್ರೇಯೋಭಿವೃದ್ದಿಗಾಗಿ ಪ್ರಣಾಳಿಕೆಯಲ್ಲಿ ಇಲ್ಲದ ಯೋಜನೆಗಳನ್ನೂ ಕೂಡ ಜಾರಿಗೊಳಿಸಿತ್ತು.  ಅದೇ ರೀತಿ ‘ಶಕ್ತಿ’ ಯೋಜನೆ ಜಾರಿ ಮಾಡಿ ಮಹಿಳಾ ಸಬಲೀಕರಣಕ್ಕೆ ಪೂರಕ ಅವಕಾಶ ನೀಡಲಾಗಿದೆ. ಇದರಿಂದ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ಮತ್ತು ಜಿಲ್ಲೆಯಲ್ಲಿ ಯಾವುದೇ ಪ್ರಯಾಣದ ಮಿತಿ ಇಲ್ಲದೆ ಉಚಿತವಾಗಿ ಓಡಾಡುವ ಅವಕಾಶ ಲಭಿಸಿದಂತಾಗಿದೆ.  ಈ ಮೂಲಕ ಸರ್ಕಾರದ ಮೊದಲ ಗ್ಯಾರಂಟಿ ಯನ್ನು ನಾವು ಈಡೇರಿಸಿದ್ದೇವೆ.

ಜಿಲ್ಲಾ ಉಸ್ತುವಾರಿ ಸಚಿವನಾಗಿ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಜಾರಿಗೆ ಪ್ರಯತ್ನ ನಡೆಸುತ್ತೇನೆ, ಅಲ್ಲದೆ ಪ್ರಮುಖ ಸಮಸ್ಯೆಗಳನ್ನು ಈಡೇರಿಸಲು ಪ್ರಾಮಾಣಿಕ ಯತ್ನ ಮಾಡುತ್ತೇನೆ.  ನಮ್ಮ ಸರ್ಕಾರ ನೀಡಿದ ಭರವಸೆಯಂತೆ ಜುಲೈ 01 ರಿಂದ ಉಚಿತ ವಿದ್ಯುತ್, ಉಚಿತ ಅಕ್ಕಿ ಹಾಗೂ ಆ. 15 ರಿಂದ ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ 2000 ರೂ. ನೆರವು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.  ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ಕೂಡ, ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ನಮ್ಮ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ “ಶಕ್ತಿ” ಯೋಜನೆ ರಾಜ್ಯ ಸರ್ಕಾರದ ಬಹುದೊಡ್ಡ ಯೋಜನೆಯಾಗಿದೆ.

ಚುನಾವಣೆ ಪೂರ್ವದಲ್ಲಿ ನೀಡಿದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾನುವಾರದಂದು ಚಾಲನೆ ನೀಡಲಾಗಿದ್ದು, ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಶಕ್ತಿ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಒತ್ತು ನೀಡಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಏಕಕಾಲದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆ ಆರಂಭ ಮಾಡಲಾಗುತ್ತಿದೆ.  ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಇದು ಮಹಿಳೆಯರ ಶಿಕ್ಷಣ, ಉದ್ಯೋಗಗಳಲ್ಲಿ ಸಬಲೀಕರಣ ಹೊಂದಲು ಅವಕಾಶ ನೀಡುತ್ತದೆ. ಮಹಿಳಾ ಹಾಗೂ ವಿದ್ಯಾರ್ಥಿಗಳಿಗೆ ಓಡಾಟಕ್ಕೆ ಶಿಕ್ಷಣದ ಪ್ರಗತಿಗೆ ಸಹಾಯಕವಾಗಿದೆ. ಮಹಿಳೆಯರ ಸಾಮಾಜಿಕ ಸಂಪರ್ಕಕ್ಕೆ ಶಕ್ತಿ ಯೋಜನೆ ಪೂರಕವಾಗಿದ್ದು, ಜಿಲ್ಲೆಯ ಸಮಸ್ತ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಇದನ್ನು ಕುಟುಂಬ, ಸಮಾಜ ಹಾಗೂ ದೇಶವನ್ನು ಸಧೃಡವಾಗಿಸಲು ಬಳಸಿಕೊಳ್ಳಬೇಕು ಎಂದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾತ್ ಮನೋಹರ್,  ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್. ದಿವಾಕರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್, ನಗರ ಸಭಾ ಸದಸ್ಯರಾದ ಮೀನಾಕ್ಷಮ್ಮ, ಸುರೇಶ್ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಚಿತ್ರದುರ್ಗ -ಬೆಂಗಳೂರು ಬಸ್‍ನಲ್ಲಿ ತೆರಳುವ ಮಹಿಳಾ ಪ್ರಯಾಣಿಕರಿಗೆ ಸಚಿವ ಡಿ.ಸುಧಾಕರ್ ಉಚಿತ ಬಸ್ ಟಿಕೇಟ್ ನೀಡಿದರು.  ಬಸ್ ಏರಿದ ಮಹಿಳೆಯರಿಗೆ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು, ಅಲ್ಲದೆ ಸಿಹಿ ವಿತರಿಸಲಾಯಿತು.

ಚಿತ್ರದುರ್ಗ-ದಾವಣಗೆರೆ, ಚಿತ್ರದುರ್ಗ-ಹಿರಿಯೂರು, ಚಿತ್ರದುರ್ಗ-ಚಳ್ಳಕೆರೆ ಬಸ್‍ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಸಾರಿರೆ ಸೇವೆಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಚಿತ್ರದುರ್ಗದ ಬಸ್ ನಿಲ್ದಾಣದಲ್ಲಿ ಭಾನುವಾರದಂದು ಸುಡುವ ಬಿಸಿಲಿನ ನಡುವೆಯೂ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.  ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸುವ “ಶಕ್ತಿ” ಯೋಜನೆ ಜಾರಿಗೊಳಿಸಿದ್ದು, ಮಹಿಳೆಯರಲ್ಲಿ ಸಂಭ್ರಮ ಇಮ್ಮಡಿಗೊಳಿಸಿತು.

ಮಧ್ಯಾಹ್ನ 01 ಗಂಟೆಯಾಗುತ್ತಲೇ, ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ಮಹಿಳೆಯರು ಸಂತಸದಿಂದಲೇ ಬಸ್ ಸಂಚಾರಕ್ಕೆ ಮುಂದಾದರು.  ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆ ಬಗ್ಗೆ ಕಾರ್ಯಕ್ರಮ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿ ಸಂಭ್ರಮದಿಂದ ತಮ್ಮಿಷ್ಟದ ಊರುಗಳಿಗೆ ಪ್ರಯಾಣ ಬೆಳೆಸಿದರು.

ಯೋಜನೆಯ ಸಂಕ್ಷಿಪ್ತ ಮಾಹಿತಿ :

ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗದಲ್ಲಿ 13-ರಾಜಹಂಸ, 225- ಕರ್ನಾಟಕ ಸಾರಿಗೆ, 50- ಗ್ರಾಮೀಣ ಸಾರಿಗೆ, 21- ನರ್ಮ್ ಸಾರಿಗೆ ವಾಹನಗಳು ಸೇರಿದಂತೆ 309 ವಾಹನಗಳ ಬಲವಿದ್ದು, ನಿತ್ಯ ಸುಮಾರು 80 ಸಾವಿರ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುತ್ತಿದೆ.  ಶಕ್ತಿ ಯೋಜನೆಯಡಿ ಜೂ. 11 ರಿಂದ ಮಹಿಳೆಯರು, ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರಿಗೂ ಉಚಿತವಾಗಿ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ರಾಜಹಂಸ, ನಾನ್ ಎ.ಸಿ. ಹಾಗೂ ಎ.ಸಿ. ಸ್ಲೀಪರ್, ಐರಾವತ, ಅಂಬಾರಿ ಸೇರಿದಂತೆ ಐಷಾರಾಮಿ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.

ಮಹಿಳಾ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯದ ಒಳಗೆ ಪ್ರಯಾಣ ದೂರದ ಯಾವುದೇ ಮಿತಿ ಇಲ್ಲ.  ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರ ಅಥವಾ ಕರ್ನಾಟಕ ಸರ್ಕಾರದದ ಇಲಾಖೆ, ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ/ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಕಲ್ಯಾಣ ನಿರ್ದೇಶನಾಲಯ ವಿತರಿಸಿರುವ ಗುರುತಿನ ಚೀಟಿ ಈ ದಾಖಲೆಗಳ ಪೈಕಿ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು “ಶಕ್ತಿ ಸ್ಮಾರ್ಟ್ ಕಾರ್ಡ್” ಗಳನ್ನು ವಿತರಿಸುವ ಪ್ರಕ್ರಿಯೆ ಮುಂದಿನ ಮೂರು ತಿಂಗಳ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!