ಸುದ್ದಿಒನ್, ಚಿತ್ರದುರ್ಗ, (ಆ.26) : ಕೆ.ಎಸ್.ಆರ್.ಟಿ.ಸಿ ಇಲಾಖೆಯಲ್ಲಿ ಸಂಚಾರಿ ನಿರೀಕ್ಷಕರು ಹಾಗೂ ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ 70 ಲಕ್ಷ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಐವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ನೀಡಲಾದ ದೂರಿನನ್ವಯ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.
ಆರೋಪಿಗಳು ವಂಚನೆ ಮಾಡಿದ ವಿಧಾನ : ನಮಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ
ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳು ಪರಿಚಯವಿದ್ದು,ಅವರ ಮೂಲಕ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಡುತ್ತೇವೆ ಎಂದು ಹೇಳಿಕೊಂಡು, ಸರ್ಕಾರಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದವರನ್ನು ನಂಬಿಸಿ, ಆಸೆ ಹುಟ್ಟಿಸಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಪಡೆದು ಹಗರಿಬೊಮ್ಮನಹಳ್ಳಿ ತಾಲ್ಲೂಕು ಮಾನ್ವಿ
ಡ್ಯಾಂ ಹತ್ತಿರ ಇರುವ ಕೆಎಸ್ಆರ್ಟಿಸಿ ತರಬೇತಿ ಕೇಂದ್ರದ ಮುಂಭಾಗದಲ್ಲಿ ಹಾಗೂ ಹಗರಿಬೊಮ್ಮನಹಳ್ಳಿ ಪ್ರವಾಸಿ ಮಂದಿರದಲ್ಲಿ ಸಂದರ್ಶನ ನಡೆಸಿ, ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಮಾಡಿಸಿ ನಕಲಿ ಆದೇಶಗಳನ್ನು ನೀಡಿರುತ್ತಾರೆ. ನಂತರ ಅಭ್ಯರ್ಥಿಗಳು ಕೆಲಸಕ್ಕೆ ಸೇರಲು ಸಂಬಂಧಪ್ಟ್ಟ ಕೆಎಸ್ಆರ್ಟಿಸಿ ಡಿಪೋಗಳಿಗೆ ಹೋದಾಗ ಆರೋಪಿತರು ನಕಲಿ ಆದೇಶಗಳನ್ನು ಕೊಟ್ಟು ಮೋಸಮಾಡಿರುವುದು ಗೊತ್ತಾಗಿರುತ್ತದೆ.
ಆರೋಪಿತರು ಇದೇ ರೀತಿ ಸುಮಾರು 500 ಜನ ಅಭ್ಯರ್ಥಿಗಳಿಗೆ ಮೋಸಮಾಡಿರುವುದಾಗಿ ತಿಳಿದುಬಂದಿರುತ್ತದೆ.
ಪ್ರಕರಣವನ್ನು ಬೇಧಿಸಿ, ಆರೋಪಗಳನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಎಸ್. ಪಿ. ರಾಧಿಕ.ಜಿ ಶ್ಲಾಘಿಸಿದ್ದಾರೆ.