ಸುದ್ದಿಒನ್, ಚಿತ್ರದುರ್ಗ, (ಸೆ.30) : ಪ್ರಧಾನಮಂತ್ರಿ ನಾಗರೀಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿಯನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿ ಐ.ಎನ್.ಟಿ.ಯು.ಸಿ ಜಿಲ್ಲಾ ಘಟಕ ಗುರುವಾರ ಪ್ರತಿಭಟನೆ ನಡೆಸಿತು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿಗಳ ವಿಕೋಪ ಪರಿಹಾರ ನಿಧಿ ಅಸ್ಥಿತ್ವದಲ್ಲಿದ್ದರೂ ಸಹ ಗೃಹಮಂತ್ರಿ, ರಕ್ಷಣಾಮಂತ್ರಿ, ಆರ್ಥಿಕ ಇಲಾಖೆಗಳು ಪ್ರಧಾನಮಂತ್ರಿ ನಾಗರೀಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿಯೆಂಬ ಟ್ರಸ್ಟ್ ಮೂಲಕ ಭಾರತೀಯರನ್ನು ಭಾವನಾತ್ಮಕವಾಗಿ ಮೂರ್ಖರನ್ನಾಗಿಸುತ್ತಿವೆ. ಸರ್ಕಾರಿ ಲಾಂಛನ, ಪ್ರಧಾನಮಂತ್ರಿಗಳ ಭಾವಚಿತ್ರ ಬಳಕೆ, ಸರ್ಕಾರಿ ವೆಬ್‍ಸೈಟ್ ಹಾಗೂ ಪ್ರಧಾನಮಂತ್ರಿಗಳ ಕಚೇರಿ ವಿಳಾಸವನ್ನು ಬಳಸಿಕೊಂಡು ಹಗಲು ದರೋಡೆ ಮಾಡಿದ್ದಾರೆ ಎಂದು ದೂರಿದರು.
2021ರ ಮಾರ್ಚ್27 ರಂದು ಅಸ್ಥಿತ್ವಕ್ಕೆ ಬಂದ ಈ ಟ್ರಸ್ಟ್ ಕೇವಲ 5 ದಿನಗಳಲ್ಲಿ 3,076 ಕೋಟಿ ರೂ.ಗಳನ್ನು ಸಂಗ್ರಹಿಸಿದ ವಿವರ ನೀಡಿ ಕಳಪೆ ವೆಂಟಿಲೇಟರ್‍ಗಳನ್ನು ಪೂರೈಸಿದೆ. ಒಂದೂವರೆ ವರ್ಷದ ಲೆಕ್ಕವನ್ನು ದೆಹಲಿ ಹೈಕೋರ್ಟ್ ಮೂಲಕ ಕೇಳಿದರೆ, ಪ್ರಧಾನಮಂತ್ರಿ ನಾಗರೀಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿ ಖಾಸಗಿಯದ್ದೇ ಹೊರತು ಕೇಂದ್ರ ಸರ್ಕಾರದ್ದಲ್ಲ ಮತ್ತು ಇದು ಮಾಹಿತಿಹಕ್ಕು ವ್ಯಾಪ್ತಿಗೆ ಬರುವುದಿಲ್ಲ ಎಂಬ ಮಾಹಿತಿಯನ್ನು ದೆಹಲಿ ಹೈ ಕೋರ್ಟ್‍ಗೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾದ ಪ್ರದೀಪ್ ಕುಮಾರ್ ಶ್ರೀವಾಸ್ತವ್‍ರವರು ಪ್ರಧಾನಮಂತ್ರಿ ನಾಗರೀಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿಯನ್ನು ನಿರ್ವಹಿಸುತ್ತಿದ್ದು, ಖಾಸಗಿ ಆಡಿಟರ್ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ. ಭಾರತ ಸರ್ಕಾರದ್ದೇ ಎಲ್ಲವನ್ನೂ ಬಳಸಿಕೊಂಡು ಹಣ ದರೋಡೆ ಮಾಡಲು ಖಾಸಗಿಯದ್ದು ಎಂದು ಬಿಂಬಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಈ ನಡೆ ಭಾರತದ ಇತಿಹಾಸದಲ್ಲಿ ಅತ್ಯಂತ ಖಂಡನೀಯವಾದದ್ದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಐ.ಎನ್.ಟಿ.ಯು.ಸಿ ಜಿಲ್ಲಾಧ್ಯಕ್ಷ ಆರ್.ಅಶೋಕ್‍ನಾಯ್ಡು, ಜಿಲ್ಲಾ ಉಪಾಧ್ಯಕ್ಷ ಯಶ್ವಂತ್, ಚಿತ್ರದುರ್ಗ ಬ್ಲಾಕ್ ಗ್ರಾಮಾಂತರ ಅಧ್ಯಕ್ಷ ರೇವಣಸಿದ್ದಪ್ಪ ಬಿ.ಕಲ್ಕುಂಟೆ, ಭರಮಸಾಗರ ಬ್ಲಾಕ್ ಅಧ್ಯಕ್ಷ ಕುಬೇಂದ್ರಪ್ಪ, ಹೊಳಲ್ಕೆರೆ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಸಂತೋಷ್, ಅಸಂಘಟಿತ ಜಿಲ್ಲಾಧ್ಯಕ್ಷ ಮೋಹನ್‍ಪೂಜಾರಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖುದ್ದೂಸ್, ಐ.ಟಿ ವಿಭಾಗದ ಅಧ್ಯಕ್ಷ ಪ್ರಕಾಶ್‍ರಾಮನಾಯ್ಕ್ ಇತರರು ಪಾಲ್ಗೊಂಡಿದ್ದರು.