ಸುದ್ದಿಒನ್, ಉತ್ತರ ಪ್ರದೇಶ : ಗುರುವಾರ ಮಧ್ಯಾಹ್ನ 2.30 ರ ಸುಮಾರಿಗೆ ಉತ್ತರ ಪ್ರದೇಶದ ಗೊಂಡಾ ಎಂಬಲ್ಲಿ ದಿಬ್ರುಗಢ ಎಕ್ಸ್‌ಪ್ರೆಸ್‌ನ (15904) 4 ಎಸಿ ಭೋಗಿಗಳು ಸೇರಿದಂತೆ ಒಟ್ಟು 12 ಬೋಗಿಗಳು ಪಲ್ಟಿಯಾಗಿವೆ. ಈ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ರೈಲು ಚಂಡೀಗಢದಿಂದ ಬರುತ್ತಿದ್ದು, ಉತ್ತರ ಪ್ರದೇಶದ ಜಿಲಾಹಿ ರೈಲು ನಿಲ್ದಾಣ ಮತ್ತು ಗೋಸಾಯಿ ದಿವಾ ನಿಲ್ದಾಣದ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ : ಗೊಂಡಾ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ. ಮತ್ತು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಮುಖ್ಯಮಂತ್ರಿಗಳ ಕಚೇರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಭರದಿಂದ ಸಾಗಿದ ಪರಿಹಾರ ಕಾರ್ಯಗಳು : ರೈಲ್ವೆ ಮೆಡಿಕಲ್ ವ್ಯಾನ್ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ದಿಬ್ರುಗಢ ಎಕ್ಸ್‌ಪ್ರೆಸ್ (15904) ಹಳಿತಪ್ಪಿದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ತಿನ್ಸುಕಿಯಾ (9957555984),
ಫರ್ಕಟಿಂಗ್ (995755596),
ಮರಿಯಾನಿ (6001882410),
ಸಿಮಲ್ಗುರಿ (8789543798),
ತಿನ್ಸುಕಿಯಾ (9957555959),
ದಿಬ್ರುಗಢ್ (9957555960). ಈ ಘಟನೆ ಮಧ್ಯಾಹ್ನ 2.37 ಕ್ಕೆ ನಡೆದಿದೆ ಎಂದು ಈಶಾನ್ಯ ರೈಲ್ವೆ ಸಿಪಿಆರ್‌ಒ ಪಂಕಜ್ ಸಿಂಗ್ ತಿಳಿಸಿದ್ದಾರೆ.
ಅಸ್ಸಾಂ ಸಿಎಂ ಪ್ರತಿಕ್ರಿಯೆ : ರೈಲು ಅಪಘಾತದಲ್ಲಿ ತಮ್ಮ ರಾಜ್ಯದ ಯಾರಾದರೂ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ.
ಜೂನ್ 17 ರಂದು, ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್ ಕಡೆಗೆ ಹೋಗುತ್ತಿದ್ದ ಕಾಂಚನ್ ಜಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು 15 ಜನರು ಸಾವನ್ನಪ್ಪಿದರು ಮತ್ತು 60 ಜನರು ಗಾಯಗೊಂಡಿದ್ದರು.