ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ : ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ಪ್ರಯಾಣ..!

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಂದು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದ ಕಾರಣ ದೆಹಲಿ ಏಮ್ಸ್ ಅಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಲಾಗುತ್ತಿತ್ತು. ಆದರೆ ಇಂದ ರಾತ್ರಿ 8 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

 

ಮನಮೋಹನ್ ಸಿಂಗ್ ಅವರು ದೇಶದ ಹಣಕಾಸು ಸಚಿವರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ. 1991ರಲ್ಲಿ ಪಿ.ವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಮೊದಲ ಬಾರಿಗೆ ವಿತ್ತ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು. 2004 ರಿಂದ 2014ರವರೆಗೂ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ಮನಮೋಹನ್ ಸಿಂಗ್ ಅವರು ರಾಜ್ಯಸಭಾ ಸದಸ್ಯ ಸ್ಥಾನದಿಂದ ನಿವೃತ್ತಿ ಪಡೆದುಕೊಂಡಿದ್ದರು.

ಇನ್ನು ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ನಾಳೆ ಬೆಳಗಾವಿಯಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಅಧಿವೇಶನ ರದ್ದಾಗಿದೆ. ಈಗಾಗಲೇ ಸೋನಿಯಾ ಗಾಂಧಿ, ಪ್ರಿಯಾಂಕ ವಾದ್ರಾ ಅಂತಿಮ ದರ್ಶನಕ್ಕೆ ತೆರಳಿದ್ದಾರೆ. ಇದೀಗ ರಾಜ್ಯ ಕಾಂಗ್ರೆಸ್ ನಾಯಕರು ಸಹ ಅಂತಿಮ ದರ್ಶನಕ್ಕಾಗಿ ದೆಹಲಿಯತ್ತ ಪಯಣ ಬೆಳೆಸಿದ್ದಾರೆ. ನಾಳೆ ಕಾರ್ಯಕ್ರಮದ ನಿಮಿತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಬೆಳಗಾವಿಗೆ ಆಗಮಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ದೆಹಲಿಗೆ ಫ್ಲೈಟ್ ಹತ್ತಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ನಾಯಕರು ದೆಹಲಿಗೆ ಹೊರಟಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *