ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ಆಗ್ರಹಿಸಿ ಇಂದು ಹಲವಾರು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡ್ರು ಸುದ್ದಿಗೋಷ್ಟಿ ನಡೆಸಿ, ಕಾವೇರಿ ವಿಚಾರಕ್ಕೆ ಕಣ್ಣೀರು ಹಾಕಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅಣೆಕಟ್ಟೆಗೆ ಹೋಗಿ ಖುದ್ದು ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ವಿವರ ನೀಡಿದ ಬಳಿಕ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ತಮಿಳುನಾಡಿನವರೂ ಬದುಕಬೇಕು, ನಾವೂ ಬದುಕಬೇಕು. ಹೊರರಾಜ್ಯದವರನ್ನು ಕಳುಹಿಸಿ ಎಂದು ಹೇಳಿದ್ದೆ. ನನ್ನ ಶಕ್ತಿ ಮೀರಿ ರಾಜ್ಯಸಭೆಯಲ್ಲಿ ಮಾತನಾಡಿದ್ದೇನೆ.
ನಾಳೆ ಬಂದ್ ವಿಚಾರಕ್ಕೆ ಯಾರ್ ಯಾರು ಏನೇನು ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ. ರಾಜ್ಯದ ಜನರನ್ನು ಉಳಿಸಲು 91ನೇ ವಯಸ್ಸಿನಲ್ಲಿ ಮಾತನಾಡಿದೆ. ನಾಳೆ ಬಂದ್ ನಡೆದು ಹೋಗಲಿ. ಕುಮಾರಸ್ವಾಮಿ ಅವರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಬಂದ್ ಶಾಂತಿಯುತವಾಗಿ ನಡೆಯಲಿ. ಕಾವೇರಿ ವಿಚಾರಕ್ಕೆ ಕೇಂದ್ರ ಜಲಶಕ್ತಿ ಇಲಾಖೆ ಅರ್ಜಿ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಬೇಕು. ಕಾವೇರಿ ವ್ಯಾಪ್ತಿಯ ಸಮಸ್ಯೆ ತಿಳಿಯಲು ಕೇಂದ್ರ ಸಮಿತಿ ಕಳುಹಿಸಲಿ. ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಪ್ರಧಾನಿ ಮೋದಿ ಅವರು ನನ್ನ ಮನವಿಯನ್ನು ಪುರಸ್ಕರಿಸುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ತಿಳಿಸಿದ್ದಾರೆ.