ಬೆಂಗಳೂರು: ಎಂಎಲ್ಎ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಉದ್ಯಮಿ ಗೋವಿಂದ ಬಾಬು ಬಳಿ ಐದು ಕೋಟಿ ಹಣ ಪಡೆದ ಆರೋಪದ ಮೇಲೆ ಚೈತ್ರಾ ಕುಂದಾಪುರ ಸಿಸಿಬಿ ವಶದಲ್ಲಿದ್ದಾಳೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಒಂದೊಂದೆ ವಿಚಾರಗಳು ಹೊರ ಬರುತ್ತಿವೆ. ಚೈತ್ರಾ ಯಾರ್ಯಾರದ್ದೋ ಜೊತೆಗೆ ಮಾತನಾಡಿರುವ ಆಡಿಯೋಗಳು ಲೀಕ್ ಆಗುತ್ತಿವೆ.
ಆ ಆಡಿಯೋದಲ್ಲಿ ಬಿಜೆಪಿ ಮಾಜಿ ಸಚಿವ ಸುನೀಲ್ ಕುಮಾರ್ ಹೆಸರು ಕೂಡ ಕೇಳಿ ಬಂದಿದೆ. ಚೈತ್ರಾ ಬೇರೆ ಪೊಲೀಸ್ ಕಸ್ಟಡಿಗೆ ಹೋಗುವ ಮುನ್ನ ಸ್ವಾಮೀಜಿಯ ಬಂಧನವಾದರೆ ದೊಡ್ಡ ದೊಡ್ಡವರ ಹೆಸರು ಹೊರಗೆ ಬರಲಿದೆ ಎಂದು ಬೇರೆ ಹೇಳಿದ್ದಳು. ಅದರ ಬೆನ್ನಲ್ಲೇ ಹಲವು ಹೆಸರುಗಳು ಕೇಳಿ ಬರುತ್ತಿವೆ.
ಈ ಸಂಬಂಧ ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಿಜೆಪಿಯ ಟಿಕೆಟ್ ಹಗರಣದಲ್ಲಿ ದಿನಕ್ಕೊಂದೊಂದು ಹೆಸರು ಹೊರಬರುತ್ತಿವೆ, ಚೈನ್ ಚೈತ್ರಳ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ, ಸುನಿಲ್ ಕುಮಾರ್ ಅವರಿಗೂ ಚೈತ್ರಳಿಗೂ ಈ ಹಗರಣದಲ್ಲಿ ಇರುವ ಸಂಬಂಧವೇನು ಎಂಬುದು ಇನ್ನೂ ನಿಗೂಢ. ಬಿಜೆಪಿ ನಾಯಕರ ಹೆಸರುಗಳು ಕೇಳಿಬಂದರೂ @BJP4Karnataka ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿರುವುದೇಕೆ ? ಪಕ್ಷದ ಹೆಸರಲ್ಲೇ ವಂಚನೆ ನಡೆದಿದ್ದರೂ ಬಿಜೆಪಿ ದೂರು ದಾಖಲಿಸದೆ ಸುಮ್ಮನಿರುವುದೇಕೆ? ಎಂದು ಪ್ರಶ್ನಿಸಿದೆ.