ಉಡುಪಿ: ಸಿದ್ದರಾಮಯ್ಯ ಸರ್ಕಾರವಿದ್ದಾಗ ಶ್ರೀಕೃಷ್ಣ ಮಠವನ್ನ ಧಾರ್ಮಿಕ ದತ್ತಿಗೆ ಸೇರಿಸುವ ಯೋಚನೆ ಇತ್ತು ಎಂಬ ಶಾಕಿಂಗ್ ವಿಚಾರವನ್ನ ಸ್ಚಪಕ್ಷದವರೇ ಬಿಟ್ಟು ಕೊಟ್ಟಿದ್ದಾರೆ.
ಮಠದ ರಾಜಾಂಗಣದಲ್ಲಿ ನಡೆದ ವಿಶ್ವಾರ್ಣಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ವಿಚಾರವನ್ನ ತಿಳಿಸಿದ್ದಾರೆ. ಆ ಸಮಯದಲ್ಲಿ ಮಠಕ್ಕೆ ತೊಂದರೆಯಾದ್ರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರಂತೆ. ಈ ಸಂಬಂಧ ಮಾತನಾಡಿರುವ ಪ್ರಮೋದ್ ಮಧ್ವರಾಜ್, ಈ ವಿಚಾರ ಪ್ರಸ್ತಾಪವಾದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದೆ. ಹಾಗಾಗಿ ಆ ಪ್ರಯತ್ನಕ್ಕೆ ಫುಲ್ ಸ್ಟಾಪ್ ಬಿದ್ದಿತ್ತು ಎಂದಿದ್ದಾರೆ.
ಶ್ರೀಕೃಷ್ಣ ಮಠಕ್ಕೆ 800 ವರ್ಷಗಳ ಇತಿಹಾಸವಿದೆ. ಆದ್ರೆ ಸಿದ್ದರಾಮಯ್ಯ ಸರ್ಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಹೊರಟಿತ್ತು. ಇಲ್ಲಿಯವರೆಗೂ ಯಾರಿಗೂ ಈ ವಿಚಾರವನ್ನ ಹೇಳಿರಲಿಲ್ಲ. ಆದ್ರೆ ಈಗ ಆ ವಿಚಾರ ಹೇಳಬೇಕು ಅನ್ನಿಸಿತ್ತು ಎಂದಿದ್ದಾರೆ.
ಪ್ರಮೋದ್ ಮಧ್ವರಾಜ್ ಕೆಲ ಸಮಯದಿಂದ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿ ಸೇರ್ತಾರೆ ಅನ್ನೋ ಗುಸುಗುಸು ಕೂಡ ಇದೆ. ಜೊತೆ ಇತ್ತೀಚೆಗೆ ಮೋದಿಯವರನ್ನ ಹಾಡಿ ಹೊಗಳಿದ್ದರು ಕೂಡ. ಇದೀಗ ಇದ್ದಕ್ಕಿದ್ದ ಹಾಗೇ ಸ್ವಪಕ್ಷದ ಮೇಲೆಯೇ ಆರೋಪ ಮಾಡುತ್ತಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ. ಉಡುಪಿ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಇದೀಗ ಈ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.