ಚಿತ್ರದುರ್ಗ : ಮಾಜಿ ಸಚಿವ ಹೆಚ್. ಏಕಾಂತಯ್ಯನವರಿಗೆ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಜಿಲ್ಲೆಯ ಹಿರಿಯೂರು ತಾಲ್ಲೂಕು ಬಬ್ಬೂರು ಗ್ರಾಮದಲ್ಲಿ ವಾಸವಾಗಿರುವ ಮಾಜಿ ಸಚಿವ ಹೆಚ್.ಏಕಾಂತಯ್ಯ ರಾಜ್ಯ ಸರಕಾರದ ಸಚಿವರಾಗಿ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಾಮಾಣಿಕ ಹಾಗೂ ದಕ್ಷ ರಾಜಕಾರಣಿಯಾಗಿದ್ದ ಅವರು ಇತ್ತೀಚೆಗೆ ರಾಜಕೀಯದಿಂದ ತೆರೆಮರೆಗೆ ಸರಿದಿದ್ದಾರೆ. ಆದರೆ ತಮ್ಮ ಸ್ವಗ್ರಾಮದಲ್ಲಿರುವ ಫಾರಂ ಹೌಸ್ ನಲ್ಲಿ ನಾನಾ ರೀತಿಯ ಹೊಸ ಕೃಷಿ ಆಯಾಮಗಳ ಪ್ರಯೋಗದಲ್ಲಿ ನಿರತರಾಗಿದ್ದಾರೆ.
ಅವರ ತೋಟದಲ್ಲಿ ರೇಷ್ಮೆ, ತೆಂಗು,ಡೈರಿ ಫಾರಂ ಸೇರಿದಂತೆ ನಾನಾ ಕೃಷಿ ಪ್ರಯೋಗಗಳು ನಿರಂತರವಾಗಿ ಜರುಗುತ್ತಿವೆ. ಇವರ ಕೃಷಿ ಸೇವೆಯನ್ನು ಗುರುತಿಸಿರುವ ಬಾಗಲಕೋಟೆ ಕೃಷಿ ವಿವಿ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಸಕ್ರಿಯ ರಾಜಕಾರಣಿ ಹಾಗೂ ಪ್ರಗತಿಪರ ಕೃಷಿಕರಿಗೆ ಸಂದ ಗೌರವ ಇದಾಗಿದೆ.
25 ನೇ ಮೇ ಬುಧವಾರ ಬಾಗಲಕೋಟೆ ತೋಟಗಾರಿಕಾ ವಿವಿ ಯಲ್ಲಿ ಘನವೆತ್ತ ರಾಜ್ಯಪಾಲರು ಹೆಚ್.ಏಕಾಂತಯ್ಯನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ಜಿಲ್ಲಾ ಹೇಮರೆಡ್ಡಿ ಸಮಾಜಿ, ವೀರಶೈವ ಸಮಾಜ ಸೇರಿದಂತೆ ನಾನಾ ಸಂಘಟನೆಗಳು ಇವರಿಗೆ ಅಭಿನಂದನೆ ಸಲ್ಲಿಸಿವೆ.