- ಭರಮಸಾಗರ ದೊಡ್ಡಕೆರೆ ಬಳಿ ಬಿಚ್ಚುಗತ್ತಿ ಭರಮಣ್ಣನಾಯಕ ಹಾಗೂ ಸಿರಿಗೆರೆ ಶ್ರೀಗಳ ಪ್ರತಿಮೆ ನಿಮಾರ್ಣ ಆಗಬೇಕು.
- ದುರ್ಗಕ್ಕೆ ಮದಕರಿ ನಾಯಕರ ಕೊಡುಗೆ ಸದಾ ಸ್ಮರಿಸಬೇಕು;ಮಾಜಿ ಸಚಿವ ಎಚ್.ಆಂಜನೇಯ ಒತ್ತಾಸೆ
ಚಿತ್ರದುರ್ಗ, (ಅ.12) : ಭರಮಸಾಗರ ಒಂದು ಸಾವಿರ ಎಕರೆ ವಿಸ್ತೀರ್ಣದ ದೊಡ್ಡಕೆರೆಯ ನಿರ್ಮಾತೃ ಬಿಚ್ಚುಗತ್ತಿಭರಮಣ್ಣನಾಯಕ ಹಾಗೂ ಒಣಗಿದ್ದ ಕೆರೆಗೆ ನೀರು ಹರಿಸಿದ ಭಗೀರಥರಾದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ನಾವು ಸದಾ ಸ್ಮರಿಸಬೇಕು. ಈ ನಿಟ್ಟಿನಲ್ಲಿ ಕೆರೆ ದಂಡೆ ಮೇಲೆ ಜೀವರಾಶಿ ಉಳಿವಿಗೆ ಶ್ರಮಿಸಿದ ಇಬ್ಬರು ಮಹಾನ್ ಸಾಧಕರ ಕಂಚಿನ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ.
ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿತ್ರದುರ್ಗ ಜಿಲ್ಲೆ ಮಳೆಯಾಶ್ರೀತ ಪ್ರದೇಶವಾಗಿದ್ದು, ಬರಗಾಲವನ್ನು ಒದ್ದುಕೊಂಡು ಮಲಗಿದೆ. ಇಲ್ಲಿನ ನೀರಿನ ಸಮಸ್ಯೆ ಅರಿತು 17ನೇ ಶತಮಾನದಲ್ಲಿಯೇ ನೀರಿನ ಸಂಗ್ರಹಕ್ಕೆ ನೂರಾರು ಕೆರೆ, ಕಟ್ಟೆ, ಕೊಳ್ಳ, ಹೊಂಡ ನಿರ್ಮಿಸಿದ ಖ್ಯಾತಿ ದುರ್ಗವನ್ನು ಆಳಿದ ಮದಕರಿನಾಯಕರಿಗೆ ಸಲ್ಲುತ್ತದೆ.
ಅದರಲ್ಲೂ ಬಿಚ್ಚುಗತ್ತಿ ಭರಮಣ್ಣನಾಯಕ ಅನೇಕ ಕೆರೆ, ಹೊಂಡಗಳನ್ನು ನಿರ್ಮಿಸುವ ಮೂಲಕ ಬಯಲುಸೀಮೆ ಜನರ ಬಾಯಾರಿಕೆ ತಣಿಸುವ ಕಾರ್ಯವನ್ನು ಮಾಡಿರುವುದು ಸದಾ ಸ್ಮರಣೀಯ.
ವಿಶೇಷವಾಗಿ ಸಂತೇಹೊಂಡ ಸೇರಿದಂತೆ ಚಿತ್ರದುರ್ಗ ನಗರ ಕೇಂದ್ರದಲ್ಲಿ ದೊಡ್ಡ ಹೊಂಡಗಳನ್ನು ನಿರ್ಮಿಸಿದ್ದಾರೆ. ಇದರಿಂದ ಅಂತರ್ಜಲ ವೃದ್ಧಿ ಜತೆಗೆ, ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕೆಲಸವನ್ನು ಮಾಡಿದ್ದಾರೆ.ಅದರಲ್ಲೂ ಭರಮಸಾಗರದಲ್ಲಿ ಬೃಹತ್ ಕೆರೆ ನಿರ್ಮಿಸಿ, ಸಾವಿರಾರು ರೈತರ ಬದುಕಿಗೆ ಆಸರೆ ಒದಗಿಸಿದ್ದರು.
ಆದರೆ, ಕಾಲಕ್ರಮೇಣ ಮಳೆ ಕಡಿಮೆಯಾಗಿ, ವಿವಿಧೆಡೆ ಚೆಕ್‍ಡ್ಯಾಂ ನಿರ್ಮಾಣಗಳಿಂದ ಕೆರೆ ಬರಿದಾಗಿ ಭರಮಸಾಗರ ಸುತ್ತಮುತ್ತಲಿನ ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು.
ಸದಾ ಜನರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮನಮಿಡಿಯುವ ಸಿರಿಗೆರೆ ತರಳಬಾಳು ಜಗದ್ಗುರುಗಳು, ಈ ಪ್ರದೇಶದಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಿ, ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ತುಂಗಾಭದ್ರ ನದಿಯಿಂದ ಏತನೀರಾವರಿ ಮೂಲಕ ಕೆರೆ ತುಂಬಿಸುವ ಮಹತ್ತರ ಕಾರ್ಯಕ್ಕೆ ಮುಂದಾದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯನ್ನು ಬಜೆಟ್‍ನಲ್ಲಿ ಸೇರ್ಪಡೆ ಮಾಡಿ ಅನುದಾನವನ್ನು ಬಿಡುಗಡೆ ಮಾಡಿದರು, ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ರಾಜಕಾರಣಿಗಳು ಶ್ರೀಗಳ ಆಶಯಕ್ಕೆ ಬೆನ್ನೆಲುಬಾಗಿ ನಿಂತು ತುರ್ತಾಗಿ ಯೋಜನೆಗೆ ಚಾಲನೆ ನೀಡಿ, ಒಂದೂವರೆ ವರ್ಷದಲ್ಲಿಯೇ ಕಾಮಗಾರಿ ಮುಕ್ತಾಯಗೊಂಡಿದ್ದು ಗಮನಾರ್ಹ.
ತರಳಬಾಳು ಹಿರಿಯ ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಸ್ಮರಣೆ ಜರುಗಿದ ಕೆಲವೇ ದಿನಗಳಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕನ ದೊಡ್ಡಕೆರೆಗೆ ನೀರು ಹರಿದು, ಭರಮಸಾಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ವಾತಾವರಣವನ್ನೇ ನಿರ್ಮಾಣ ಮಾಡಿದೆ.
ಕೆರೆಗೆ ನೀರು ಹರಿದುಬರುತ್ತಿರುವ ದೃಶ್ಯ ವೀಕ್ಷಿಸಲು ಸಿರಿಗೆರೆ ಶ್ರೀಗಳು ಆಗಮಿಸಿದ್ದ ವೇಳೆ ಸಮಾರಂಭ ಆಯೋಜಿಸಲಾಗಿತ್ತು.
ಅಂದಿನ ಸಮಾರಂಭದಲ್ಲಿ ನಾನು ಮಾತನಾಡಿ, ಸಿರೆಗೆರೆ ಗುರುಗಳ ಇಚ್ಛಾಶಕ್ತಿಯಿಂದ ನೀರು ತರಲು ಶ್ರಮಿಸಿದ ರೀತಿ ನೆನಪು ಮಾಡಿಕೊಂಡೇ, ಗುರುಗಳ ಕಂಚಿನ ಪ್ರತಿಮೆ ನಿರ್ಮಿಸಿ, ಜೀವಜಲ ರಾಶಿಗಳಿಗೆ ಜೀವ ತಂದುಕೊಟ್ಟಿದ್ದನ್ನು ಸ್ಮರಿಸಿದ್ದೇ.
ಈಗ ಕೆರೆ ನಿರ್ಮಾತೃ, ದೂರದೃಷ್ಟಿ ನಾಯಕ ಬಿಚ್ಚುಗತ್ತಿ ಭರಮಣ್ಣನಾಯಕನ ಪ್ರತಿಮೆ ನಿರ್ಮಾಣ ಮಾಡಬೇಕೆಂದು ನನ್ನ ಹೆಬ್ಬಯಕೆ ಆಗಿದೆ.
ಈ ನಿಟ್ಟಿನಲ್ಲಿ ದೊಡ್ಡಕೆರೆ ದಂಡೆ ಮೇಲೆ ಸುಂದರ ಉದ್ಯಾನ ನಿರ್ಮಾಣ ಮಾಡಿ, ಅದರಲ್ಲಿ ಕೆರೆ ನಿರ್ಮಾತೃ ಬಿಚ್ಚುಗತ್ತಿ ಭರಮಣ್ಣನನಾಯಕ ಹಾಗೂ ತರಳಬಾಳು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕಂಚಿನ ಪ್ರತಿಮೆಯನ್ನು ನಿರ್ಮಿಸಬೇಕು. ಈ ಮಹಾನ್ ಸಾಧಕರ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ನಾನು ಸಂಪೂರ್ಣ ಭಾಗಿಯಾಗುತ್ತೇನೆ.