ಮುಂಬೈ: ಇತ್ತಿಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಟಿಯಲ್ಲಿ ಕ್ಷಮೆ ಕೇಳುವುದಕ್ಕೆ ನಾನೇನು ಸಾವರ್ಕರ್ ಅಲ್ಲ ಎಂದು ಹೇಳಿದ್ದರು. ಇದೀಗ ಆ ಹೇಳಿಕೆ ಸಂಬಂಧ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಪದೇ ಪದೇ ನಮ್ಮ ವೀರ ದೇವರು ಸಾವರ್ಕರ್ ಬಗ್ಗೆ ಮಾತನಾಡುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಮಹಾರಾಷ್ಟ್ರದ ವಿರೋಧ ಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಲಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ನಾವೆಲ್ಲಾ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಮ್ಮ ವಿರೋಧ ಪಕ್ಷದ ಮೈತ್ರಿ ಸಾಗುತ್ತಾ ಇರುವುದು ಸರಿಯಾಗಿಯೇ ಇದೆ.
ರಾಹುಲ್ ಗಾಂಧಿಯವರೇ ಈ ರೀತಿಯಾದಂತ ಹೇಳಿಕೆಯನ್ನು ನೀಡಬೇಡಿ. ಬಿಜೆಪಿ ನಾಯಕರು ನಿಮ್ಮನ್ನು ಪ್ರಚೋದಿಸುತ್ತಿದ್ದಾರೆ. ಹೀಗಾಗಿ ಯಾವುದೇ ಹೇಳಿಕೆ ನೀಡುವ ಮುನ್ನ ಎಚ್ಚರವಾಗಿರಿ. ಇಂತಹ ಹೇಳಿಕೆಯಿಂದಾಗಿ ಮೈತ್ರಿ ಕೂಟಕ್ಕೆ ಧಕ್ಕೆಯಾಗುವುದಲ್ಲದೆ ವಿರೋಧಿ ಅಲೆಗಳು ಹುಟ್ಟಿಕೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.