ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ಸದ್ಯ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆಯಷ್ಟೇ ಹೆಚ್ಚಿನ ಗಮನ ನೀಡಿದ್ದಾರೆ. ಹೀಗಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಶಿಕಾರಿಪುರವನ್ನು ಮಗ ವಿಜಯೇಂದ್ರ ಅವರಿಗೆ ಬಿಟ್ಟು ಕೊಡಲಾಗಿದೆ. ಇದೀಗ ವಿಜಯೇಂದ್ರ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಅದರಲ್ಲಿ ತನ್ನಲ್ಲಿರುವ ಆಸ್ತಿಯ ವಿಚಾರವನ್ನು ತಿಳಿಸಿದ್ದಾರೆ.

ವಿಜಯೇಂದ್ರ ಮತ್ತು ಅವರ ಪತ್ನಿ ಪ್ರೇಮಾ ವಿಜಯೇಂದ್ರ ಒಟ್ಟು 126.18 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ, ದಂಪತಿಗೆ ಒಂದೇ ಒಂದು ಸ್ವಂತ ಕಾರು ಇಲ್ಲ. ವಿಜಯೇಂದ್ರ ಅವರು 46.82 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 7.85 ಮೌಲ್ಯದ ಚರಾಸ್ತಿಯ ಒಡತಿಯಾಗಿದ್ದಾರೆ. ಇನ್ನು ಈ ದಂಪತಿ ಬಳಿ ಪ್ರಸ್ತುತ 70.11 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ.

ವಿಜಯೇಂದ್ರ ಒಟ್ಟು 1.75 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಹೊಂದಿದ್ದಾರೆ. ದಂಪತಿ ಬಳಿ ಒಟ್ಟು 2.29 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳು ಇವೆ. ವಿಜಯೇಂದ್ರ ಅವರ ಬಳಿ 1.34 ಕೆಜಿ ಚಿನ್ನ ಇದ್ದರೆ, ಅವರ ಪತ್ನಿ 1.25 ಕೆಜಿ ಚಿನ್ನಾಭರಣಗಳನ್ನು ಹೊಂದಿದ್ದಾರೆ.
ಶಿಕಾರಿಪುರದಲ್ಲಿ ಕೃಷಿ ಭೂಮಿ, ದೊಡ್ಡಬಳ್ಳಾಪುರ, ರಾಮನಗರ, ಶಿಕಾರಿಪುರ, ಶಿವಮೊಗ್ಗ, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಏಳು ಮನೆಗಳ್ನು ಹೊಂದಿದ್ದಾರೆ. ಇನ್ನು ತಮ್ಮ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.

