ಸದ್ಯದಲ್ಲಿಯೇ ಮಾರ್ಗದರ್ಶಿ ಸಮಿತಿ ರಚನೆ : ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ

2 Min Read

 

ಚಿತ್ರದುರ್ಗ : ಸದ್ಯದಲ್ಲಿಯೇ ಮಾರ್ಗದರ್ಶಿ ಸಮಿತಿ ರಚಿಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸೋಣ ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಂ.ಶಿವಸ್ವಾಮಿ ಕಸಾಪ ನಿಕಟಪೂರ್ವ ಅಧ್ಯಕ್ಷರು ಹಾಗೂ ಎಲ್ಲಾ ಹಿರಿಯರ ಮಾರ್ಗದರ್ಶನ ಪಡೆದು ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ವಿಜ್ಞಾನ ಹಾಗೂ ಸಾಹಿತ್ಯ ಗೋಷ್ಟಿಗಳನ್ನು ನಡೆಸೋಣ.

ಮೊದಲಿನಿಂದಲೂ ನನಗೆ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿಯಿತ್ತು. ಹಾಗಾಗಿ ನಿರಂತರವಾಗಿ ವಿಜ್ಞಾನ ಕೇಂದ್ರದ ಸಂಪರ್ಕವಿಟ್ಟುಕೊಂಡಿದ್ದೇನೆ. ಕನ್ನಡ ಸಾಹಿತ್ಯದ ಸೇವೆ ಮಾಡಬೇಕೆಂಬ ಆಸೆಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿದೆ. ಅಲ್ಲಿ ನಾನು ಯಾರನ್ನು ನನ್ನ ಸ್ಪರ್ಧಿಗಳು ಅಂದುಕೊಳ್ಳದೆ ಸಹಜವಾಗಿ ಚುನಾವಣೆಯಲ್ಲಿ ಗೆದ್ದೆ. ಈಗ ನನ್ನ ಮೇಲೆ ಜವಾಬ್ದಾರಿ ಜಾಸ್ತಿಯಿದೆ. ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆರಂಭಿಸೋಣ.

ವಿಜ್ಞಾನದ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಚುರುಕಾಗಬೇಕು. ಕಸಾಪ. ಚುನಾವಣೆಯಲ್ಲಿ ಮತದಾರರು ಹಾಗೂ ನನ್ನ ಎಲ್ಲಾ ಹಿತೈಷಿಗಳು ಬೆಂಬಲಿಸಿ ಗೆಲ್ಲಿಸಿದ್ದಾರೆ. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎನ್ನುವುದು ನನ್ನ ಬಯಕೆ ಎಂದು ಹೇಳಿದರು.

ಕೆ.ಎಂ.ಶಿವಸ್ವಾಮಿರವರನ್ನು ಸನ್ಮಾನಿಸಿ ಮಾತನಾಡಿದ ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಧಕ್ಕೆ ಬಂದಾಗ ಜನರಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೇಲಿದೆ. ಕನ್ನಡ ಸಾಹಿತ್ಯ ಪರಿಷತ್ ತನ್ನ ಚೌಕಟ್ಟನ್ನು ಮೀರಿ ಜನರ ಬಳಿ ಹೋಗಬೇಕಾಗಿರುವುದರಿಂದ ಆರೋಗ್ಯ ಪೂರ್ಣವಾದ ಮನಸ್ಸುಗಳು ತುಂಬಾ ಮುಖ್ಯ. ಕರ್ನಾಟಕದ ನ್ಯಾಯಾಲಯದಲ್ಲಿ ನ್ಯಾಯಾಧೀಶರುಗಳು ಕನ್ನಡದಲ್ಲಿ ತೀರ್ಪು ನೀಡಿದಾಗ ಮಾತ್ರ ನಿಜವಾಗಿಯೂ ಕಕ್ಷಿದಾರನಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಆಂಗ್ಲ ಭಾಷೆಯಲ್ಲಿ ತೀರ್ಪುಗಳು ಹೊರಬರುತ್ತಿರುವುದರಿಂದ ಅದನ್ನು ಓದಿ ತಿಳಿದುಕೊಳ್ಳುವುದು ಕಕ್ಷಿದಾರನಿಗೆ ಕಷ್ಟವಾಗುತ್ತದೆ. ಇಂತಹ ಅನೇಕ ಗಂಭೀರ ಸಮಸ್ಯೆಗಳ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಸಲಹೆ ನೀಡಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ರಾಜಧರ್ಮ ಪಾಲನೆ ಮುಖ್ಯ. ಕರ್ನಾಟಕದಲ್ಲಿ ಕನ್ನಡಿಗರೆ ತಬ್ಬಲಿಗಳಾದರೆ ಯಾರ ಬಳಿ ಹೋಗಿ ನ್ಯಾಯ ಕೇಳಬೇಕು. ಕನ್ನಡಿಗರ ಸಾರ್ವಭೌಮ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪರವಾಗಿ ನಿಲ್ಲಬೇಕು. ಮಹಾದಾಯಿ, ಮೇಕೆದಾಟು ಯೋಜನೆ ಅನುಷ್ಟಾನಗೊಳಿಸುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇಂತಹ ಅನೇಕ ಪ್ರಚಲಿತ ಸಮಸ್ಯೆಗಳ ಬಗ್ಗೆ ತಾಲ್ಲೂಕು ಜಿಲ್ಲಾ ಹಾಗೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಗಳಲ್ಲಿ ಸರ್ಕಾರದ ಗಮನ ಸೆಳೆದು ವೈಜ್ಞಾನಿಕತೆ, ವೈಚಾರಿಕತೆಗೆ ಸಂಬಂಧಿಸಿದಂತೆ ಗೋಷ್ಟಿ, ವಿಚಾರ ಸಂಕಿರಣಗಳನ್ನು ನಡೆಸಬೇಕು ಎಂದು ಹೇಳಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಸಿ.ಎನ್.ಮಹೇಶ್ ವೇದಿಕೆಯಲ್ಲಿದ್ದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಪದಾಧಿಕಾರಿಗಳು ಹಾಗೂ ಕೆ.ಎಂ.ಶಿವಸ್ವಾಮಿರವರ ಅಭಿಮಾನಿಗಳು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *