ಮೊದಲೆಲ್ಲ ಫ್ಯಾಷನ್ ಡಿಸೈನರ್ ಅಂದ್ರೆ ಬಾಲಿವುಡ್ ಟಾಲಿವುಡ್ ಕಡೆ ಬೆರಳು ತೋರಿಸಲಾಗುತ್ತಿತ್ತು. ಆದರೆ ಈಗ ಅನೇಕ ಕನ್ನಡರಿಗರು ಈ ಫ್ಯಾಷನ್ ಜಗತ್ತಿಗೆ ಜಿಗಿದಿದ್ದು, ಸತತ ಶ್ರಮದಿಂದ ಇದೇ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದ್ದಾರೆ. ಅವರಲ್ಲಿ ಮುಖ್ಯವಾಗಿ ಫಾರೆವರ್ ನವೀನ್ ಕುಮಾರ್ ಡಿಸೈನ್ ಖ್ಯಾತಿಯ ನವೀನ್ ಕುಮಾರ್ ಅವರ ಸಾಧನೆ ಇಂದಿನ ಯುವ ಡಿಸೈನರ್ಸ್ಗಳಿಗೆ ಸ್ಫೂರ್ತಿ.
ನವೀನ್ ಕುಮಾರ್ ಫ್ಯಾಷನ್ ಡಿಸೈನರ್ ಆಗಿ ಎಂಟ್ರಿ ಆಗಿ ಕೇವಲ ಐದು ವರ್ಷಗಳಷ್ಟೇ. ಆದರೆ ಈ ಐದು ವರ್ಷಗಳಲ್ಲಿ ನವೀನ್, ಕೇವಲ ಸ್ಯಾಂಡಲ್ವುಡ್, ಬಾಲಿವುಡ್ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಎಂಬಿಎ ಹಾಗೂ ಜಿಇಎಂಎಂ ಕೋರ್ಸ್ ಮುಗಿಸಿರುವ ನವೀನ್ ಅವರು ತಮ್ಮ ಯುನಿಕ್ ಐಡಿಯಾಗಳನ್ನು ಹೊತ್ತು 2016 ಫ್ಯಾಷನ್ ಡಿಸೈನರ್ ಆಗಿ ಕೆಲಸ ಆರಂಭಿಸಿದ್ದರು. ಪ್ರಾರಂಭದ ದಿನಳಲ್ಲಿ ಏಳುಬೀಳುಗಳನ್ನು ಕಂಡ ನವೀನ್ ಸದ್ಯ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಫೇವರೇಟ್ ಡಿಸೈನರ್.
ಅತಿ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಇವರು ಸುಮಾರು 83 ಫ್ಯಾಶನ್ ಶೋಗಳಲ್ಲಿ 1600ಕ್ಕೂ ಹೆಚ್ಚು ವಿಭಿನ್ನ ಕಾಸ್ಟ್ಯೂಮ್‍ಗಳನ್ನು ಶೋಕೇಸ್ ಮಾಡಿದ್ದಾರೆ. 2019ರಲ್ಲಿ ಮಲೇಷಿಯಾದಲ್ಲಿ ನಡೆದ ಖಾಸಗಿ ಟಿವಿ ಕಾರ್ಯಕ್ರಮವೊಂದಕ್ಕೆ ಬರೋಬ್ಬರಿ 87 ಸ್ಟಾರ್ಸ್ಗಳಿಗೆ ಯೂನಿಕ್ ಲುಕ್ ನೀಡಿದ್ದಾರೆ.
ದೇಶಾದ್ಯಂತ14 ರಾಜ್ಯ ಸೇರಿದಂತೆ ಅಂತರಾಷ್ಟ್ರೀಯ ಫ್ಯಾಶನ್ ಶೋ ಸ್ಪರ್ಧಿಗಳಿಗೆ ಕಾಸ್ಟೂಮ್ ರಚಿಸಿರುವ ನವೀನ್ ಕುಮಾರ್ ಚಿತ್ರರಂಗದ ಶ್ರೀಯಾ ಶರಣ್, ಏಮಿ ಜಾಕ್ಸನ್, ಅಜಿತ್ ಸೇರಿದಂತೆ ಅನೇಕ ನಟ-ನಟಿಯರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸೈಮಾ, ಐಫಾ ಅವಾರ್ಡ್ ಫಂಕ್ಷನ್ ಒಳಗೊಂಡಂತೆ ಕಿರುತೆರೆ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿ ಕಾಸ್ಟ್ಯೂಮ್ ಡಿಸೈನರ್ ಆಗಿರುವ ನವೀನ್ ಕುಮಾರ್ ನಮ್ಮ ಬೆಂಗಳೂರಿನ ಹುಡುಗ ಎನ್ನುವುದು ಹೆಮ್ಮೆಯ ಸಂಗತಿ.