ಚಿತ್ರದುರ್ಗ, (ಡಿ.23): ಕೆ.ಎಂ.ಎಂ.ಸಿ.ಆರ್. 1994 ರ ನೂನ್ಯತೆಗಳನ್ನು ಸರಿಪಡಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರ ನಿರ್ಲಕ್ಷೆ ವಹಿಸುತ್ತಿರುವುದನ್ನು ವಿರೋಧಿಸಿ ಡಿ.28 ರಂದು ಬೆಳಗಾಂನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಚಿತ್ರದುರ್ಗ ಜಿಲ್ಲಾ ಕ್ರಷರ್ ಮತ್ತು ಕ್ವಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಾಜೀದ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗಣಿಗಾರಿಕೆಯನ್ನು ಸಕ್ರಮವಾಗಿ ನಡೆಸಲು ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಸುರ್ವಣಸೌಧದ ಮುಂದೆ ಹದಿನೈದು ಸಾವಿರ ಜನ ಸೇರಿ ಪ್ರತಿಭಟನೆ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ. ಗುರುವಾರದಿಂದ ಕ್ರಷರ್ ಕ್ವಾರಿಗಳನ್ನು ಸ್ಥಗಿತಗೊಳಿಸಿದ್ದು, ಒಂದು ಬಾಣಲಿ ಜಲ್ಲಿಯನ್ನು ಕೊಡುತ್ತಿಲ್ಲ. ರಾಜ್ಯಾದ್ಯಂತ ಎಲ್ಲಾ ಕಡೆಯಿಂದ ಕ್ರಷರ್ ಹಾಗೂ ಕ್ವಾರಿ ಮಾಲೀಕರು, ಕೂಲಿಕಾರರು ಸೇರಿ ಬೆಳಗಾಂನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಒಂದು ಕ್ರಷರ್‍ನಿಂದ ಐದುನೂರು ಕುಟುಂಬಗಳು ಜೀವಿಸುತ್ತಿವೆ. ರಾಜ್ಯ ಸರ್ಕಾರದ ಮೊಂಡುತನದಿಂದ ಲಾರಿ, ಟ್ರಾಕ್ಟರ್, ಟಿಪ್ಪರ್ ಡ್ರೈವರ್‍ಗಳು ತೊಂದರೆ ಅನುಭವಿಸುವಂತಾಗಿದೆ. ಗುತ್ತಿಗೆದಾರರು ಹಾಗೂ ನಮ್ಮ ಕಡೆಯಿಂದಲೂ ಸರ್ಕಾರ ರಾಯಲ್ಟಿ ವಸೂಲು ಮಾಡುತ್ತಿರುವುದು ನಿಲ್ಲಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹದಿನೆಂಟು ಕ್ರಷರ್‍ಗಳಿದೆ. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‍ಗೆ ಅನುಮತಿ ನೀಡಿರುವುದನ್ನು ಸರ್ಕಾರ ನಿಲ್ಲಿಸಿ ಇ.ಸಿ.ಗುಣ ಮಟ್ಟವನ್ನು ಹೆಚ್ಚಿಸಬೇಕು. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವ ರಾಜ್ಯ ಸರ್ಕಾರ ಸಣ್ಣ ಕೈಗಾರಿಕೆಗಳನ್ನು ಬಂದ್ ಮಾಡಲು ಹೊರಟಿದೆ. ಲೈಸೆನ್ಸ್ ಪಡೆದು ಕ್ರಷರ್ ನಡೆಸುತ್ತಿರುವ ಕಡೆ ಅಕ್ಕಪಕ್ಕ ಇರುವ ಜಾಗವನ್ನು ಲೀಸ್‍ಗೆ ಕೊಡಿ ಎಂದು ಕೇಳುತ್ತಿದ್ದೇವೆ. ಸಾಲ ಪಡೆದು ಕಂತುಗಳನ್ನು ಕಟ್ಟಲು ನಮ್ಮಿಂದ ಆಗುತ್ತಿಲ್ಲ. ನಮ್ಮ ಬೇಡಿಕೆಗಳು ಈಡೇರುವತನಕ ಒಂದು ಬಾಣಲಿ ಜೆಲ್ಲಿಯಾಗಲಿ, ಎಂ.ಸ್ಯಾಂಡನ್ನಾಗಲಿ ಕೊಡುವುದಿಲ್ಲ. ನದಿ ಮರಳಿಗೆ ಬೇಡಿಕೆಯಿರುವುದರಿಂದ ಎಂ.ಸ್ಯಾಂಡನ್ನು ಯಾರು ಕೊಂಡುಕೊಳ್ಳುತ್ತಿಲ್ಲದಿರುವುದು ನಮಗೆ ನಷ್ಠವನ್ನುಂಟು ಮಾಡುತ್ತಿದೆ. ಅದಕ್ಕಾಗಿ ಚಿತ್ರದುರ್ಗ ಜಿಲ್ಲೆಯಿಂದ ಹತ್ತು ಬಸ್‍ಗಳಲ್ಲಿ ಬೆಳಗಾಂಗೆ ಹೋಗಿ ಡಿ.28 ರಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆಂದು ಅಬ್ದುಲ್ ಮಾಜೀದ್ ತಿಳಿಸಿದರು.
ಜಿಲ್ಲಾ ಕ್ರಷರ್ ಮತ್ತು ಕ್ವಾರಿ ಮಾಲೀಕರ ಅಸೋಸಿಯೇಷನ್ ಕಾರ್ಯದರ್ಶಿ ಜಿ.ಬಿ.ಶೇಖರ್, ವೆಂಕಟೇಶ್, ಮಲ್ಲಿಕಾರ್ಜುನ್, ಅಶೋಕ್‍ರೆಡ್ಡಿ, ಕಮ್ಯುನಿಸ್ಟ್ ಪಕ್ಷದ ಕಾಂ.ಜಿ.ಸಿ.ಸುರೇಶ್‍ಬಾಬು, ಅನಂದ್, ಅಭಿಷೇಕ್, ನಿರಂಜನ, ವೀರಭದ್ರಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.