ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ಮಾ.29) : ಸಾರ್ವಜನಿಕರು ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ 1950 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು .ಜೆ.ಆರ್.ಜೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಧಾನ ಸಭಾ ಚುನಾವಣೆ ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ದೂರುಗಳನ್ನು ಸಿ-ವಿಜಿಲ್ ಮೊಬೈಲ್ ಆಪ್ ಮೂಲಕವೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವೀಕರಿಸಲಾದ ದೂರುಗಳನ್ನು ನಿಗಧಿತ ಸಮಯದಲ್ಲಿ ಬಗೆಹರಿಸಲಾಗುವುದು ಎಂದರು.
35 ಚೆಕ್‍ಪೋಸ್ಟ್ ಕಾರ್ಯನಿರ್ವಹಣೆ: ಚುನಾವಣಾ ಅಕ್ರಮ ತಡೆಗಾಗಿ ಜಿಲ್ಲೆಯಲ್ಲಿ 35 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಯು ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯೊಂದಿಗೆ 150 ಕಿ.ಮೀ ಗಡಿ ಹೊಂದಿದೆ. ಹಾಗಾಗಿ 8 ಕಡೆ ಅಂತರರಾಜ್ಯ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿಯೇ ಐ.ಪಿ.ಸಿ,ಸಿ.ಆರ್.ಪಿ.ಸಿ ಅಬಕಾರಿ ಕಾಯ್ದೆ, ಪೊಲೀಸ್ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ರೂ. 15,97,200 ನಗದು, 239.26 ಲೀಟರ್ ಮದ್ಯ, (ಸುಮಾರು ರೂ.2,98,599) 1.267 ಕೆ.ಜಿ ಗಾಂಜಾ (ರೂ30,500), 150 ಸೀರೆಗಳು (ರೂ.2,89,700/-) ವಶಕ್ಕೆ ಪಡೆಯಲಾಗಿದ್ದು, ಇಲ್ಲಿಯವರೆಗೂ ನಗದು, ಎಲ್ಲ ವಸ್ತುಗಳ ಮೌಲ್ಯ ಸೇರಿದಂತೆ ಒಟ್ಟು 22,19,499 ರೂಗಳನ್ನು ಚೆಕ್‍ಪೋಸ್ಟ್ ಸೇರಿದಂತೆ ವಿವಿಧ ತಂಡಗಳಿಂದ ವಶಕ್ಕೆ ಪಡೆದು ಸೀಜ್ ಮಾಡಲಾಗಿದೆ ಎಂದು ತಿಳಿಸಿದರು.