ಎ.ಶ್ರೀನಿವಾಸ್ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ : ಮನೆಯಲ್ಲಿ ಸಂಭ್ರಮ : ಆದರೆ…..?

2 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 03 : ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕುಂತಿ ಗ್ರಾಮದ ಹಗಲುವೇಷಗಾರ ಎ.ಶ್ರೀನಿವಾಸ್ ಅವರಿಗೆ ಪ್ರಸಕ್ತ ವರ್ಷದ ಜನಪದ ಅಕಾಡೆಮಿ ಪ್ರಶಸ್ತಿ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದೆ.

ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಶ್ರೀನಿವಾಸ್ ತಂದೆ ದಿವಂಗತ ಧೂಪಂ ಅಂಜಿನಪ್ಪ ಹಾರ‍್ಮೋನಿಯಂ ಸೇರಿ ವಿವಿಧ ಕಲೆಯಲ್ಲಿ ಪರಿಣಿತರು. ಅವರ ಹಾಗೂ ಸಮುದಾಯದ ಬಳುವಳಿಯಾಗಿ ಹಗಲುವೇಷದಲ್ಲಿ ಶ್ರೀನಿವಾಸ್ ಜನಮೆಚ್ಚಿದ ಕಲಾವಿದ. ಆದರೆ, ಎಂದೂ ಪ್ರಶಸ್ತಿಗಳ ಬೆನ್ನತ್ತಿ ಹೋದವರಲ್ಲ. ಅದರ ಕುರಿತು ಮಾಹಿತಿಯನ್ನೇ ಹೊಂದಿಲ್ಲದ ಮುಗ್ಧ ವ್ಯಕ್ತಿ.
ಇಂತಹ ಕಲಾವಿದನ ಮನೆ ಬಾಗಿಲಿಗೆ ಜನಪದ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದು, ಹಳ್ಳಿಯಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುವ ಕಲಾವಿದರ ಬದುಕಿನಲ್ಲಿ ಆಶಾಭಾವನೆ ಮೂಡಿಸಿದೆ.

57 ವರ್ಷದ ಎ.ಶ್ರೀನಿವಾಸ್ ಬಹುರೂಪಿ ಕಲಾವಿದ. ಕಲಾವಿದರ ಕುಟುಂಬವಾದ್ದರಿಂದ ಬಾಲ್ಯದಲ್ಲೇ ಮುಖಕ್ಕೆ ಬಣ್ಣ ಹಚ್ಚಿಕೊಂಡು ರಾಮಾಯಣ, ಮಹಾಭಾರತದ ಪ್ರಸಂಗಗಳು ಮತ್ತು ಪುರಾಣ, ಭಜನೆ ಇತರೆ ಕಾರ್ಯಕ್ರಮಗಳಲ್ಲಿ ನಿರಂತರ ಪ್ರಯೋಗ ನಡೆಸುತ್ತ ಬಂದವರು.

ಸಂಗೀತ ವಾದ್ಯಗಳಾದ ಹಾರ್ಮೋನಿಯಂ, ತಬಲಾ ವಾದನದಲ್ಲಿ ಪರಿಣತಿ ಪಡೆದುಕೊಂಡಿದ್ದಾರೆ. ಇವರ ಕಲಾ ಸೇವೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಂಘ, ಸಂಸ್ಥೆಗಳು, ಮಠ ಮಾನ್ಯಗಳು, ಜಿಲ್ಲಾಡಳಿತ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು, ಪ್ರಸ್ತುತ ಜನಪದ ಅಕಾಡೆಮಿ ಪ್ರಶಸ್ತಿ ಅವರ ಮುಡಿಗೇರಿದೆ.

ಪ್ರಶಸ್ತಿಗೆ ಆಯ್ಕೆ ವಿಷಯ ಜಿಲ್ಲೆಯ ಹೆಮ್ಮೆಯ ಸಂಗತಿ ಅಷ್ಟೇ ಅಲ್ಲ, ಕಲಾಕ್ಷೇತ್ರವಷ್ಟೇ ಅಲ್ಲದೇ ಪ್ರಶಸ್ತಿಗೆ ಆಯ್ಕೆಯಾದ ಶ್ರೀನಿವಾಸ್ ಅವರಷ್ಟೇ ಅಲ್ಲದೇ ಪ್ರತಿಯೊಬ್ಬ ಕಲಾವಿದನು ಸೇರಿದಂತೆ ಜಿಲ್ಲೆಯ ಪ್ರತಿಯೊಬ್ಬರೂ ಸಂಭ್ರಮಿಸುವ ಸಂಧರ್ಭವಿದು. ಆದರೆ ದೂರದೂರಿಗೆ ಪ್ರಯಾಣ ನಡೆಸಿ ಪ್ರಶಸ್ತಿ ಸ್ವೀಕರಿಸುವ ಶಕ್ತಿ ಈಗ ಅವರು ಹೊಂದಿಲ್ಲ. ಏಕೆಂದರೆ ಅವರು ಈಗಾಗಲೇ ಮೂರು ಬಾರಿ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.

ಒಂದೆಡೆ ಪ್ರಶಸ್ತಿ ಲಭಿಸಿದ ಸಂಭ್ರಮ, ಮತ್ತೊಂದೆಡೆ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ತೆರಳಲು ದೈಹಿಕ ಶಕ್ತಿ ಹೊಂದಿಲ್ಲ. ಈ ಮಧ್ಯೆಯೂ ಮನೆಗೆ ಬಂದು ಶುಭ ಹಾರೈಸುವ ಗಣ್ಯರತ್ತ ಪ್ರತಿಯಾಗಿ ಕೈಮುಗಿಯುವ ಅವರ ಮುಗ್ಧತೆ, ಮತ್ತೊಬ್ಬರ ಕುರಿತು ಗೌರವ ಭಾವನೆ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿದೆ. ಜತೆಗೆ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.

ಎ.ಶ್ರೀನಿವಾಸ್ ಅವರ ಪುತ್ರ ಬಿ.ಎಸ್.ಮಂಜಣ್ಣ

ಅಪ್ಪನಿಗೆ ಶಕ್ತಿ ಇಲ್ಲ : ನಮ್ಮ ತಂದೆ ಪಾರ್ಶ್ವ ವಾಯುವಿಗೆ ತುತ್ತಾಗಿದ್ದು, ಹಲವು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರೂ ಸುಧಾರಣೆ ಕಂಡಿಲ್ಲ. ಹಣಕಾಸು ಸಮಸ್ಯೆ ಕಾರಣಕ್ಕೆ ಸುಮ್ಮನಾಗಿದ್ದೇವೆ. ಈಗ ಜನಪದ ಪ್ರಶಸ್ತಿ ಲಭಿಸಿದ್ದು, ಬೀದರ್‌ನಲ್ಲಿ ಸಮಾರಂಭ ಇದೆ. ಅಲ್ಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸುವಷ್ಟು ದೈಹಿಕ ಶಕ್ತಿ ಅಪ್ಪನಿಗಿಲ್ಲ ಎನ್ನುತ್ತಾರೆ ಪುತ್ರ ಬಿ.ಎಸ್.ಮಂಜಣ್ಣ.


ಗೊಲ್ಲಹಳ್ಳಿ ಶಿವಪ್ರಸಾದ್

ಮನೆ ಬಾಗಿಲಿಗೆ ಪ್ರಶಸ್ತಿ : ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಶ್ರೀನಿವಾಸ್ ಆಯ್ಕೆಯಲ್ಲಿ ಅಕಾಡೆಮಿ ಸದಸ್ಯ ಕಲಮರಹಳ್ಳಿ ಮಲ್ಲಿಕಾರ್ಜುನ ಅವರ ಪಾತ್ರ ದೊಡ್ಡದು. ಶ್ರೀನಿವಾಸ್ ಅವರು ಬೀದರ್‌ಗೆ ಬರಲು ಸಾಧ್ಯವಾಗದಿದ್ದರೆ, ನಾವುಗಳೇ ಅವರ ಮನೆಗೆ ಖುದ್ದಾಗಿ ಹೋಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದೇವೆ ಎನ್ನುತ್ತಾರೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್.


ಕಲಮರಮಹಳ್ಳಿ ಮಲ್ಲಿಕಾರ್ಜುನ್

ನಮ್ಮ ಹೊಣೆ: ಚಿತ್ರದುರ್ಗ ಜಿಲ್ಲೆ ಬುಡಕಟ್ಟುಗಳ ತೊಟ್ಟಿಲು. ಇಲ್ಲಿ ಎಲೆಮರೆ ಕಾಯಿಯಾಗಿ ಸಹಸ್ರಾರು ಮಂದಿ ಕಲಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅದರ ಭಾಗವೇ ಎ.ಶ್ರೀನಿವಾಸ್ ಅವರಿಗೆ ಪ್ರಶಸ್ತಿ ನೀಡಿರುವುದು. ಇನ್ನಷ್ಟು ಮಂದಿಯನ್ನು ಗುರುತಿಸಿ, ಗೌರವಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎನ್ನುತ್ತಾರೆ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕಲಮರಮಹಳ್ಳಿ ಮಲ್ಲಿಕಾರ್ಜುನ್.

Share This Article
Leave a Comment

Leave a Reply

Your email address will not be published. Required fields are marked *