Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂತ್ರಾಲಯದಲ್ಲಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐವರು ಜಲಸಮಾಧಿ!

---Advertisement---

ಸುದ್ದಿಒನ್,ರಾಯಚೂರು,ಮೇ.31: ಮಂತ್ರಾಲಯದ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ ತುಂಗಭದ್ರಾ ನದಿಗೆ ಈಜಲು ಇಳಿದಿದ್ದ ಐವರು ಯುವಕ-ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮಂತ್ರಾಲಯದ ಸ್ಥಳೀಯ ನಿವಾಸಿಯೊಬ್ಬರ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ಹಾಗೂ ಉರವಕೊಂಡದಿಂದ ನೆಂಟರು ಬಂದಿದ್ದರು. ಪೂಜೆ ಮುಗಿದ ನಂತರ ಎಲ್ಲರೂ ಸೇರಿ ತುಂಗಭದ್ರಾ ನದಿಯ ತೀರಕ್ಕೆ ತೆರಳಿದ್ದಾರೆ. ಆದರೆ, ವಿಧಿಯ ಆಟ ಬೇರೆಯೇ ಇತ್ತು.ನದಿಯ ಆಳ ಮತ್ತು ನೀರಿನ ಹರಿವಿನ ಅಂದಾಜಿಲ್ಲದೆ ಈಜಲು ಇಳಿದಾಗ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಹೈದರಾಬಾದ್‌ನ ಯುವನ ಚಂದ್ರ, ಸತೀಶ್ (35), ಉರವಕೊಂಡದ ಸಂಧ್ಯಾ (22) ಹಾಗೂ ಮಂತ್ರಾಲಯದ ನಿವಾಸಿಗಳಾದ ರಾಘವೇಂದ್ರ (25) ಮತ್ತು ಧನುಷ್ (23) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಅಪರ್ಣಾ ಎಂಬ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಂತ್ರಾಲಯ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ನದಿಯಲ್ಲಿ ಮುಳುಗಿದವರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಸದ್ಯ ಧನುಷ್ ಎಂಬ ಯುವಕನ ಮೃತದೇಹ ಮಾತ್ರ ಕೈಗೆಟುಕಿದ್ದು, ಇನ್ನುಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ನದಿಯಲ್ಲಿ ಮತ್ತೊಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಸದ್ಯ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Join WhatsApp

Join Now

Join Telegram

Join Now