ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 01 : ನನ್ನ ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಸುಮಾರು 35 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ನೀಡಿದ್ದು 150 ಕ್ಕೂ ಹೆಚ್ಚು ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯಲ್ಲಿ ಮುದ್ದಾಪುರ ಗ್ರಾಮದಲ್ಲಿ ಶನಿವಾರದಂದು ಆರ್.ಐ.ಡಿ.ಎಫ್. ನಬಾರ್ಡ್ ಯೋಜನೆಯಡಿ ಮುದ್ದಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ 6 ಶಾಲಾ ಕೊಠಡಿಗಳ ಉದ್ಘಾಟನೆ ಮತ್ತು ವಿವಿಧ ಕಾರ್ಯಕ್ರಮಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರ ಅನುದಾನ, ಡಿಎಂಎಫ್, ನಬಾರ್ಡ್, ಸಿಎಂ ವಿಶೇಷ ಅನುದಾನ, ರಾಜ್ಯ ವಲಯ ಸೇರಿ ಸುಮಾರು 35 ಕೋಟಿ ವೆಚ್ಚದಲ್ಲಿ ಅತ್ಯಗತ್ಯವಾಗಿರುವ ಕಡೆ ನೂತನ ಕಟ್ಟಡಗಳನ್ನು ಇಡೀ ಚಳ್ಳಕೆರೆ ಕ್ಷೇತ್ರದಲ್ಲಿ ನಿರ್ಮಾಣವನ್ನು ಮಾಡಲಾಗುತ್ತಿದೆ.
ನನಗೆ ಬರುವಂತಹ ಶಾಸಕರ ಅನುದಾನದಲ್ಲಿ ಮೊದಲ ಆದ್ಯತೆ ಶಾಲೆಗಳ ಮಾಲಭೂತ ಸೌಲಭ್ಯಕ್ಕೆ ನೀಡುತ್ತಿದ್ದೇನೆ. ಚಳ್ಳಕೆರೆ ನಗರದಲ್ಲಿ ಬಿಎಂಹೆಚ್ ಎಸ್ 6 ಕೊಠಡಿ, ಮತ್ತು ಹೆಗ್ಗೆರೆ ತಾಯಮ್ಮ ಶಾಲೆ 6 ಕೊಠಡಿ, ಕ್ಷೇತ್ರ ಮಾದರಿ ಬಾಲಕರ ಶಾಲೆ 6 ಕೊಠಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 6 ಕೊಠಡಿ ಸೇರಿ 24 ನೂತನ ಕಟ್ಟಡಗಳನ್ನು ನಿರ್ಮಾಣ ಮಾಡಿ ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ ಎಂದರು.
ತುರುವನೂರು ಹೋಬಳಿಯ ತುರುವನೂರು ಗ್ರಾಮದಲ್ಲಿ ಐದು ಕೋಟಿ ವೆಚ್ಚದಲ್ಲಿ ಪದವಿ ಕಾಲೇಜು ನಿರ್ಮಾಣ ಮಾಡಿದ್ದು ಉದ್ಘಾಟನೆ ಹಂತದಲ್ಲಿದೆ. ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಶಾಲೆಗೆ 6 ಕೊಠಡಿ, ಕೂನಬೇವು ಪ್ರಾಥಮಿಕ ಶಾಲೆಗೆ 4 ಕೊಠಡಿ, ತುರುವನೂರು ಪ್ರೌಢಶಾಲೆಗೆ 6 ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಿದ್ದು ಮುದ್ದಪುರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 66 ಲಕ್ಷದ 6 ಕೊಠಡಿಗಳನ್ನು ಇಂದು ಉದ್ಘಾಟನೆ ಮಾಡಿದ್ದೇನೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದ್ದು, ಶಿಕ್ಷಣದಿಂದ ನಾವೆಲ್ಲರೂ ವಂಚಿತರಾಗಬಾರದು. ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಸಮವಸ್ತ್ರ, ಕ್ಷೀರಭಾಗ್ಯ, ಮೊಟ್ಟೆ ಸೇರಿ ಹಲವು ಸೌಲಭ್ಯ ಒದಗಿಸಲಾಗಿದೆ. ಪೆÇೀಷಕರು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಒಂದು ಹೆಣ್ಣು ಮಗು ಶಾಲೆ ಕಲಿತರೆ, ಇಡೀ ಕುಟುಂಬವೆ ಶಾಲೆ ಕಲಿತಂತೆ. ಈ ಹಿನ್ನೆಲೆಯಲ್ಲಿ ಗಂಡು, ಹೆಣ್ಣು ತಾರತಮ್ಯ ಮಾಡದೇ ಎಲ್ಲಾರೂ ಅಭ್ಯಾಸ ಮಾಡಬೇಕು. ಕ್ಷೇತ್ರದಲ್ಲಿ ಅಂಗವಾಡಿ ಕೇಂದ್ರಗಳು, ಶಾಲಾ ಕಟ್ಟಡಗಳು, ಆಸ್ಪತ್ರೆಗಳು, ರಸ್ತೆ, ಬ್ರಿಡ್ಜ್ ಕಂ ಬ್ಯಾರೇಜ್‍ಗಳಂತಹ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದ್ದು, ಬಡವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ :
ತುರುವನೂರು ಹೋಬಳಿಯ ಸೂರನಹಳ್ಳಿಯಲ್ಲಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ 10 ಲಕ್ಷ ನೀಡಿದ್ದು ಶಾಸಕ ಟಿ.ರಘುಮೂರ್ತಿ ಅವರು ನೂತನವಾಗಿ ನಿರ್ಮಾಣವಾಗಿರುವ ಆಂಜನೇಯಸ್ವಾಮಿ ದೇವಸ್ಥಾನವನ್ನು ಲೋಕರ್ಪಣೆ ಮಾಡಿದರು.
ಸುಲ್ತಾನಿಪುರ ಕೆರೆ ಬಾಗಿನ ಅರ್ಪಣೆ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಚಾಲನೆ :
ತುರುವನೂರು ಹೋಬಳಿಯ ಸುಲ್ತಾನಿಪುರ ಕೆರೆ ಕೋಡಿ ಬಿದ್ದರಿಂದ ಇಂದು ಶಾಸಕ ಟಿ.ರಘುಮೂರ್ತಿ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿ ಉತ್ತಮವಾಗಿ ಮಳೆ ನಡೆಸಿದ್ದರಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿರುವುದು ಸಂತಸ ತಂದಿದೆ. ನೀರು ಇದ್ದರೆ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ತುರುವನೂರು ಹೋಬಳಿಯಲ್ಲಿ ಕೆರೆ ಕಟ್ಟೆಗಳ ಜೊತೆ ಅನೇಕ ಕಡೆಗಳಲ್ಲಿ ಚಕ್ ಡ್ಯಾಂ ನಿರ್ಮಾಣಗಳನ್ನು ಸಹ ಮಾಡಿದ್ದು ಅಂತರ್ಜಲ ಹೆಚ್ಚಲು ಸಹಕಾರಿಯಾಗಿದೆ ಎಂದು ತಿಳಿಸಿದರು. ರೈತರ ಮೊಗದಲ್ಲಿ ಸಹ ಸಂತಸ ತಂದಿದ್ದು ಸೂರನಹಳ್ಳಿಯಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ವೇಳೆ ಮುಂದಿನ ವರ್ಷ ಸಹ ಉತ್ತಮ ಮಳೆ ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಇದರ ಜೊತೆಗೆ 20 ಲಕ್ಷ ವೆಚ್ಚದಲ್ಲಿ ಸುಲ್ತಾನಿಪುರ ಗ್ರಾಮದಲ್ಲಿ ಸಿಸಿ ರಸ್ತಗೆ ಹಣ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಚಳ್ಳಕೆರೆ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಬಾಬುರೆಡ್ಡಿ, ಕ್ಷೇತ್ರ ಶಿಕ್ಷಣಧಿಕಾರಿ ಎಸ್.ನಾಗಭೂಷಣ್, ಮುದ್ದಾಪುರ ಗ್ರಾ.ಪಂ ಅಧ್ಯಕ್ಷೆ ಮಂಗಳ ಸಿದ್ದೇಶ್, ಉಪಾಧ್ಯಕ್ಷ ಸುಧಾರಾಣಿ ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಓಬಳೇಶ್ ಶಾಂತಮ್ಮ, ನಾಗರಾಜ್ ಸುದಮ್ಮ, ಮುಖಂಡರುಗಳಾದ ತಿಮ್ಮರಾಜು, ಮಹೇಶ್, ನಾಗರಾಜ್ ಮತ್ತು ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.