ಸಂಘಟಿತ ಪರಿಶ್ರಮದಿಂದ ಚಿತ್ರದುರ್ಗ ಕೃಷಿ ಇಲಾಖೆಗೆ ಪ್ರಥಮ ಸ್ಥಾನ‌ : ಜಂಟಿ ಕೃಷಿ ನಿರ್ದೇಶಕ ಪಿ. ರಮೇಶ್ ಕುಮಾರ್

2 Min Read

 

ಚಿತ್ರದುರ್ಗ,(ಜೂನ್.16) : ಜಿಲ್ಲೆಯ ವಿವಿಧ ಕೃಷಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ ಹಾಗೂ ಸಂಘಟಿತ ಪರಿಶ್ರಮದಿಂದ ಚಿತ್ರದುರ್ಗ ಕೃಷಿ ಇಲಾಖೆಗೆ ಪ್ರಥಮ ಸ್ಥಾನ ಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಹೇಳಿದರು.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶೇಂಗಾ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಇದರ ಜೊತೆಗೆ ಪರ್ಯಾಯ ಬೆಳೆಗಳಾದ ಸೂರ್ಯಕಾಂತಿ ಮತ್ತು ಸೋಯಾಬೀನ್‍ನ್ನು ಬೆಳೆಯುವಂತೆ ಹೇಳಿದರು. ಈಗಾಗಲೇ ಮುಂಗಾರು ಬಿತ್ತನೆಗೆ ಬೀಜ ಮತ್ತು ರಸಗೊಬ್ಬರವನ್ನು ವಿತರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದರು.

ಜಿಲ್ಲೆಯಲ್ಲಿ ಅವಶ್ಯವಿರುವ ಬೀಜ ಮತ್ತು ರಸಗೊಬ್ಬರ ದಾಸ್ತಾನುಕರಿಸಿದ್ದು, ರೈತರಿಗೆ ಬಿತ್ತನೆ ಮಾಡಲು ಯಾವುದೇ ಕೊರತೆ ಇಲ್ಲ. ಪೂರ್ವ ಮುಂಗಾರಿನಲ್ಲಿ ಸಾಮೆ, ಹತ್ತಿ, ಹೆಸರು ಬಿತ್ತನೆಯಾಗಿದೆ. ಮತ್ತು ನ್ಯಾನೋ ಯೂರಿಯಾದ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಜಿಲ್ಲೆಗೆ 92000 ಬಾಟಲ್ ಮಂಜೂರಾಗಿರುತ್ತದೆ. ಅಧಿಕಾರಿಗಳು ರೈತರಿಗೆ ಇದರ ಉಪಯೋಗದ ಮನವರಿಕೆ ಮಾಡಿಕೊಡಬೇಕು. ಈ ಗೊಬ್ಬರದಿಂದ ಪರಿಸರಕ್ಕೆ ಹಾನಿ ಕಡಿಮೆ. ಹಿಂದಿನ ವರ್ಷ ಕದಿರಿ ಲೇಪಾಕ್ಷಿ ಶೇಂಗಾ 500 ಕ್ವಿಂಟಲ್ ರೈತರಿಗೆ ವಿತರಿಸಲಾಯಿತು. ಆದರೆ ರೈತರು ಬೆಳೆಯಲು ಆಸಕ್ತಿ ತೋರಿಸುತ್ತಿಲ್ಲ. ಏಕೆಂದರೆ ಕಡಿಮೆ ರುಚಿ ಇರುವ  ಕಾರಣ. ಈ ವರ್ಷ ಡಿ.ಹೆಚ್-256 ತಳಿಯನ್ನು ಜಿಲ್ಲೆಗೆ 500 ಕ್ವಿಂಟಲ್ ವಿತರಿಸಲು ಯೋಚಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ  ಕೆ.ಬಿ. ಚಂದ್ರಶೇಖರ ಅವರು ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದಕ್ಕೆ ಸಭೆಯಲ್ಲಿ ಹರ್ಷ ವ್ಯಕ್ತಪಡಿಸಿ, ಜಂಟಿ ಕೃಷಿ ನಿರ್ದೇಶಕರನ್ನು ಅಭಿನಂದಿಸಿದರು. ಮತ್ತು ವಿವಿಧ ಇಲಾಖೆಗಳ ಕಾರ್ಯಪ್ರಗತಿ ಪರಿಶೀಲನೆ ಕೈಗೊಂಡರು.

ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕರಾದ  ಹೆಚ್.ಆರ್.ತಿಮ್ಮಯ್ಯ ಮಾತನಾಡಿ ಜಿಲ್ಲೆಯಲ್ಲಿ ಸೇಬು ಬೆಳೆಯುವ ಬಗ್ಗೆ ಹಾಗೂ ಕಾಶ್ಮೀರಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾದ ಬಿ.ಟಿ.ಜಗದೀಶ್, ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ  ಎನ್.ಆರ್.ಮಹೇಶ್ವರಪ್ಪ ಮತ್ತು ನಿರ್ದೇಶಕರುಗಳು, ವಿವಿಧ ಇಲಾಖೆಗಳಾದ ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಸಹಕಾರಿ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *