ಸುದ್ದಿಒನ್, ಚಿತ್ರದುರ್ಗ, ನವೆಂಬರ್.13 : ನವದೆಹಲಿಯ ಶ್ರೀ ಸತ್ಯಸಾಯಿ ಸಭಾಂಗಣದಲ್ಲಿ ನ.15ರಂದು ಆಯೋಜಿಸಿರುವ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಇಬ್ಬರು ಬಾಲ ಪ್ರತಿಭೆಗಳು ಭಾಗವಹಿಸಲಿದ್ದಾರೆ ಎಂದು ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಶಮಾನೋತ್ಸವ ಅಂಗವಾಗಿ ದೆಹಲಿ ಘಟಕದ ಸಹಯೋಗದಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚವಲಹಳ್ಳಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪವಿತ್ರ ಹಾಗೂ ವಿಚಾರ ಗೋಷ್ಠಿ 1ರಲ್ಲಿ ಬಿ.ಎಂ.ತಾನ್ವಿ ಹೆಚ್ಚುತ್ತಿರುವ ಆಧುನಿಕತೆಯಲ್ಲಿ ಮಕ್ಕಳಿಗೆ ಇರಬೇಕಾದ ಸಂಸ್ಕೃತಿ ಸಂಸ್ಕಾರಗಳ ಮೌಲ್ಯಗಳು ಕುರಿತು ವಿಷಯ ಮಂಡಿಸಲಿದ್ದಾರೆ.
ಮಕ್ಕಳ ಪೋಷಕರು ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಪದಾಧಿಕಾರಿಗಳು ಸೇರಿ ಚಿತ್ರದುರ್ಗ ಜಿಲ್ಲೆಯಿಂದ 11 ಮಂದಿ ದೆಹಲಿಗೆ ತೆರಳುತ್ತಿದ್ದೇವೆ. ರಾಜ್ಯದಿಂದ ಸುಮಾರು 500 ಮಕ್ಕಳು ಭಾಗವಹಿಸಲಿದ್ದಾರೆ.
ಪೋಷಕರು, ಸಾಹಿತ್ಯಾಭಿಮಾನಿಗಳು, ಸಂಸದರು, ಸಚಿವರು, ಶಾಸಕರು, ಸಾಹಿತಿಗಳು, ಸಂಸ್ಕೃತಿ ಚಿಂತಕರು ಒಟ್ಟಾರೆ ಸುಮಾರು 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಚಿತ್ರದುರ್ಗ ತಂಡ ಭಾನುವಾರ ತೆರಳುತ್ತಿದ್ದು, ನ.14ರ ಬೆಳಗ್ಗೆ ದೆಹಲಿ ತಲುಪುತ್ತೇವೆ. ನ.16ರ ಬೆಳಗ್ಗೆ ಅಲ್ಲಿಂದ ಬಿಡುತ್ತೇವೆ ಎಂದು ಹೇಳಿದರು.
ಅಂದು ಬೆಳಗ್ಗೆ 9 ರಿಂದ ರಾತ್ರಿ 10 ರವರೆಗೆ ನಾನಾ ಕಾರ್ಯಕ್ರಮಗಳು ಜರುಗಲಿದ್ದು, ಜಿ.ಪಿ.ರಾಜರತ್ನಂ ವೇದಿಕೆಯಲ್ಲಿ ಖ್ಯಾತ ಸಾಹಿತಿ ಡಾ.ನಾ.ಸೋಮೇಶ್ವರ ಉದ್ಘಾಟಿಸುವರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಜ್ ತಂಗಡಗಿ ಮಕ್ಕಳ ಕೃತಿಗಳನ್ನು ಬಿಡುಗಡೆ ಮಾಡುವರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಪ್ರಜ್ವಲ್ ರೇವಣ್ಣ, ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಬಿ.ಹುಕ್ಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಅಂದು ಬೆಳಗ್ಗೆ 8ಕ್ಕೆ ದೆಹಲಿ ಕನ್ನಡ ಶಾಲೆಯಲ್ಲಿ ಧ್ವಜಾರೋಹಣ, 8.30ಕ್ಕೆ ದೆಹಲಿ ಕನ್ನಡ ಶಾಲೆಯಿಂದ ಶ್ರೀ ಸತ್ಯ ಸಾಯಿ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, 9.30ಕ್ಕೆ ಉದ್ಘಾಟನಾ ಕಾರ್ಯಕ್ರಮ, ಬೆಳಗ್ಗೆ 11.30ಕ್ಕೆ ಕವಿಗೋಷ್ಠಿ, ಮಧ್ಯಾಹ್ನ 12.30 ರಿಂದ 1.30 ರವರೆಗೆ ಮಲ್ಲಿಗೆ ಸುಧೀರ್ ಹಾಗೂ ಮಕ್ಕಳಿಂದ ಸಮೂಹ ಗಾಯನ ಹಾಗೂ ಮಕ್ಕಳಿಂದ ಕೋಲಾಟ, ಹುಲಿ ಕುಣಿತ, ಕಂಸಾಳೆ ಸೇರಿದಂತೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಮಧ್ಯಾಹ್ನ 1.30ಕ್ಕೆ ವಿಚಾರ ಗೋಷ್ಠಿ 1, ಮಧ್ಯಾಹ್ನ 2.30ಕ್ಕೆ ವಿಚಾರ ಗೋಷ್ಠಿ 2, ಮಧ್ಯಾಹ್ನ 3.30ಕ್ಕೆ ಸಂವಾದ, ಸಂಜೆ 4.30ಕ್ಕೆ ಸಮಾರೋಪ. ಪ್ರಶಸ್ತಿ ಪ್ರಧಾನ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ ಪದಾಧಿಕಾರಿಗಳಾದ ವಿಜಯಕುಮಾರ್, ಸಿ.ಚಿತ್ರಲಿಂಗಪ್ಪ, ಯಾದಲಗಟ್ಟೆ ಜಗನ್ನಾಥ್, ಷಫಿವುಲ್ಲಾ, ಮಿಥನ್ ಚಕ್ರವರ್ತಿ, ಪ್ರಭಾಕರ್, ಚಂದ್ರಣ್ಣ, ಓ.ರವಿ, ಉಪನ್ಯಾಸಕ ಚಿಕ್ಕಣ್ಣ, ಶಿಕ್ಷಕ ಜಗದೀಶ್, ಬಾಲ ಪ್ರತಿಭೆಗಳಾದ ಪವಿತ್ರ, ತಾನ್ವಿ, ಮಕ್ಕಳ ಪೋಷಕರಾದ ಕಾಲ್ಕೆರೆ ಷಣ್ಮುಖಪ್ಪ, ಚವಲಿಹಳ್ಳಿ ಗೊಲ್ಲರಹಟ್ಟಿ ಅಜ್ಜಪ್ಪ, ಮತ್ತಿತರರಿದ್ದರು.