Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭವಿಷ್ಯದ ನಿರ್ಮಾಣಕ್ಕೆ ದೃಢ ಸಂಕಲ್ಪ ಅಗತ್ಯ : ಡಾ. ಕರಿಯಪ್ಪ ಮಾಳಿಗೆ

---Advertisement---

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ವಿದ್ಯಾರ್ಥಿಗಳು ವರ್ತಮಾನವನ್ನು ಸರಿಯಾಗಿ ಬಳಸಿಕೊಂಡರೆ ತಮ್ಮ ಭವಿಷ್ಯವನ್ನು ಅತ್ಯುತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಭವಿಷ್ಯದ ನಿರ್ಮಾಣಕ್ಕೆ ಭದ್ರವಾದ ಬುನಾದಿ ಎಂದರೆ ದೃಢವಾದ ಸಂಕಲ್ಪ ಮಾಡುವುದೇ ಆಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಡಾ. ಕರಿಯಪ್ಪ ಮಾಳಿಗೆ ಹೇಳಿದರು.

​ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅವರು ಮಾತನಾಡಿದರು.
​ಮುಂದುವರಿದು ಮಾತನಾಡಿದ ಅವರು, “ಮೊದಲೆಲ್ಲಾ ಹೆಣ್ಣುಮಕ್ಕಳಿಗೆ ಶಿಕ್ಷಣ ಏಕೆ ಎಂಬ ಧೋರಣೆ ಇತ್ತು. ಆದರೆ ಇಂದು ಅಂತಹ ನಿರ್ಬಂಧಗಳು ಕಡಿಮೆಯಾಗಿದ್ದು, ಉನ್ನತ ಶಿಕ್ಷಣಕ್ಕೆ ವ್ಯಾಪಕ ಸವಲತ್ತುಗಳು ಲಭ್ಯವಿವೆ.

ವಿದ್ಯಾರ್ಥಿನಿಯರು ಹೆಣ್ಣು ಎಂಬ ಕಾರಣಕ್ಕೆ ಯಾರಿಂದಲೂ ಅನುಕಂಪ ಬಯಸಬಾರದು. ನಿಮ್ಮಲ್ಲಿಯೇ ಅಪಾರವಾದ ಶಕ್ತಿ ಮತ್ತು ಸಾಮರ್ಥ್ಯವಿದೆ. ಅದನ್ನು ಸರಿಯಾಗಿ ಅರ್ಥೈಸಿಕೊಂಡರೆ ಪ್ರತಿಯೊಂದು ಅವಕಾಶವೂ ನಿಮ್ಮದಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿ ಕರೆ ನೀಡಿದರು.

​ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ನವೀನ್ ಅವರು ಮಾತನಾಡಿ, “ವಿದ್ಯಾರ್ಥಿಗಳು ಕೇವಲ ಪುಸ್ತಕದ ಬದನೆಕಾಯಿಯಾಗದೇ ಸಮಾಜ ಹಾಗೂ ಸಾಮಾನ್ಯ ಜನರೊಂದಿಗೆ ನೇರ ಒಡನಾಟ ಇಟ್ಟುಕೊಳ್ಳಬೇಕು. ಆಗ ಮಾತ್ರ ಜೀವನದ ನಿಜವಾದ ಪಾಠವನ್ನು ಕಲಿಯಲು ಸಾಧ್ಯ” ಎಂದರು.

​ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುತ್ತಾ, “ನನಗೂ ಇಬ್ಬರು ಹೆಣ್ಣುಮಕ್ಕಳಿದ್ದು, ಸಮಾಜದ ಕಷ್ಟ-ಸುಖಗಳನ್ನು ಹತ್ತಿರದಿಂದ ಕಂಡು ಕಲಿಯಲಿ ಎಂಬ ಉದ್ದೇಶದಿಂದ ಅವರನ್ನು ಇಂಟರ್ನ್‌ಶಿಪ್‌ಗೆ ಕಳುಹಿಸುತ್ತಿದ್ದೇನೆ. ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಾರ್ಮಿಕರು ಹಾಗೂ ಕೃಷಿಕ ಸಮುದಾಯದವರೊಂದಿಗೆ ಬೆರೆತು, ಅವರ ಜೀವನ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವಣ್ಣ ಅವರು, “ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಜೀವನಕ್ಕೆ ಬಹಳ ಮುಖ್ಯ. ಅತಿಥಿಗಳ ಸ್ಪೂರ್ತಿದಾಯಕ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಓದುವ ಕಾಲದಲ್ಲಿ ಇಷ್ಟೊಂದು ಸವಲತ್ತುಗಳು ಇರಲಿಲ್ಲ, ಆದರೆ ಇಂದು ನಿಮಗೆ ಉತ್ತಮ ಅವಕಾಶಗಳಿವೆ. ನಮ್ಮ ಕಾಲೇಜಿಗೆ ಸ್ವಂತ ಕಟ್ಟಡದ ಸಮಸ್ಯೆ ಇದ್ದರೂ, ವಿದ್ಯಾರ್ಥಿಗಳ ಸಾಧನೆಗೆ ಮಾತ್ರ ಯಾವುದೇ ಕೊರತೆ ಇಲ್ಲ. ಬೇರೆ ಬೇರೆ ತಾಲೂಕು ಹಾಗೂ ಜಿಲ್ಲೆಗಳಿಂದ ವಿದ್ಯಾರ್ಥಿನಿಯರು ನಮ್ಮ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಆಗಮಿಸುತ್ತಿದ್ದಾರೆ ಎಂದರೆ ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದೇ ಅರ್ಥ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಸದರಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಜಯಲಕ್ಷ್ಮಮ್ಮ ಕೆ, ಡಾ. ಮಧುಸೂದನ ಪಿ ಎನ್, ಡಾ, ವಿಜಯಲಕ್ಷ್ಮಿ ಆರ್, ಡಾ, ಗಾಯಿತ್ರಮ್ಮ ಟಿ, ಶ್ರೀ ಸತೀಶ್ ಹಲಸಂದಿ, ಶ್ರೀ ಕನಕರಾಜ್ , ಶ್ರೀ, ಗಿರೀಶ್ ಎಂ. ಶ್ರೀ ಯೋಗಾನಂದ ಎಸ್.ಕೆ, ಶ್ರೀ ಶಿವಪ್ರಸಾದ್ ಆರ್, ಹಾಗೂ ಪತ್ರಾಂಕಿತ ವ್ಯವಸ್ಥಾಪಕರಾದ ವೆಂಕಟೇಶ್ ಆರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now