ಸುದ್ದಿಒನ್, ದಾವಣಗೆರೆ, ಫೆಬ್ರವರಿ. 22 : ನಗರದ ಪ್ರಸಿದ್ಧ ಬೆಣ್ಣೆ ದೋಸೆಗಾಗಿ ಹೆಸರು ಪಡೆದಿದ್ದ ಶ್ರೀ ಕೊಟ್ಟೂರೇಶ್ವರ ಹೋಟೆಲ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಹೋಟೆಲ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜು ಸಮೀಪ ಈ ದುರ್ಘಟನೆ ನಡೆದಿದೆ.
ಹೋಟೆಲ್ ರಾತ್ರಿ ವೇಳೆ ಮುಚ್ಚಲಾಗಿದ್ದರಿಂದ ಘಟನೆ ಸಂಭವಿಸಿದ ಸಮಯದಲ್ಲಿ ಒಳಗೆ ಯಾರೂ ಇಲ್ಲದಿರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಹೋಟೆಲ್‌ನಲ್ಲಿದ್ದ ಅಡುಗೆ ಸಾಮಗ್ರಿಗಳು, ಫರ್ನಿಚರ್, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ.
ದಾವಣಗೆರೆ ನಗರದ ಅತ್ಯಂತ ಹಳೆಯ ಮತ್ತು ಜನಪ್ರಿಯ ಹೋಟೆಲ್‌ಗಳಲ್ಲಿ ಒಂದಾಗಿದ್ದ ಈ ಹೋಟೆಲ್, ಬೆಣ್ಣೆ ದೋಸೆಯಿಂದ ಜನರ ಮನಸ್ಸು ಗೆದ್ದಿತ್ತು. ದಶಕಗಳಿಂದ ಗ್ರಾಹಕರ ವಿಶ್ವಾಸ ಗಳಿಸಿದ್ದ ಈ ಹೋಟೆಲ್ ಇಂದಿನ ಬೆಂಕಿ ಅವಘಡದಿಂದ ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ಬೆಂಕಿ ಕಾಣಿಸಿಕೊಂಡ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಲೀಕೆಜ್ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.




