ಚಿಕ್ಕಪೇಟೆಯ ಕುಂಬಾರಪೇಟೆ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮೂರು ಅಂತಸ್ತಿನ ಕಮರ್ಷಿಯಲ್ ಕಟ್ಟಡದ ಹಾರ್ಡ್‌ವೇರ್ ಗೋದಾಮಿನಲ್ಲಿ ಹಾಗೂ ಫ್ಯಾನ್ಸಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಕಷ್ಟಪಟ್ಟಿದ್ದಾರೆ. 20ಕ್ಕೂ ಹೆಚ್ಚು ಅಂಗಡಿಗಳಿಗೂ ಬೆಂಕಿ ಆವರಿಸುತ್ತಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.
ಹಾರ್ಡ್‌ವೇರ್ ಗೋದಾಮಿನಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ಪೈಪ್‌ಗಳು ಸೇರಿದಂತೆ ಇತರೆ ವಸ್ತುಗಳಿಗೆ ಬೆಂಕಿ ತಗುಲಿರುವುದರಿಂದ ದಟ್ಟ ಹೊಗೆ ಆವರಿಸಿದೆ. ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚಾಗಿದ್ದರಿಂದ ಹೊಗೆ ಹಾಗೂ ಬೆಂಕಿಯನ್ನು ನಿಯಂತ್ರಿಸಲು ದೊಡ್ಡ ಸವಾಲಾಗಿತ್ತು.
ಘಟನಾ ಸ್ಥಳಕ್ಕೆ ಆರು ಅಗ್ನಿಶಾಮಕದಳ ವಾಹನಗಳು ಆಗಮಿಸಿದ್ದು, ದಟ್ಟ ಹೊಗೆ ಆವರಿಸಿಕೊಂಡ ಹಿನ್ನೆಲೆ ಆಕ್ಸಿಜನ್ ಸಿಲಿಂಡರ್, ಮಾಸ್ಕ್ ಧರಿಸಿ ಅಗ್ನಿಶಾಮಕ ಸಿಬ್ಬಂದಿ ಅಂಗಡಿ ಒಳಗೆ ಹೋಗಿ, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಕಳೆದ ಒಂದು ಗಂಟೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.



