ಸುದ್ದಿಒನ್ : ಒಡಿಶಾ ಬಾಲಸೋರ್ ರೈಲು ಅಪಘಾತ ಘಟನೆ ಮರೆಯುವ ಮುನ್ನವೇ, ತಮಿಳುನಾಡಿನ ಮಧುರೈ ರೈಲು ನಿಲ್ದಾಣದಲ್ಲಿ ಲಕ್ನೋ-ರಾಮೇಶ್ವರಂ ಪ್ರವಾಸಿ ರೈಲಿನಲ್ಲಿ
ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಪ್ರವಾಸಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 10 ಮಂದಿ ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಕ್ನೋ-ರಾಮೇಶ್ವರಂ IRCTC ವಿಶೇಷ ರೈಲು ಶುಕ್ರವಾರ 60 ಪ್ರಯಾಣಿಕರೊಂದಿಗೆ ಲಕ್ನೋದಿಂದ ಹೊರಟಿದೆ. ಈ ರೈಲು ತಿರುಪತಿ- ರಾಮೇಶ್ವರಂ- ಕನ್ಯಾಕುಮಾರಿ ಮುಂತಾದ ಸ್ಥಳಗಳಿಗೆ ಹೋಗುವುದಿತ್ತು. ಆದರೆ ಮಧುರೈ ರೈಲು ನಿಲ್ದಾಣದಲ್ಲಿ ರೈಲು ಸ್ವಲ್ಪ ಹೊತ್ತು ನಿಂತಿದೆ. ಆ ಸಮಯದಲ್ಲಿ ಪ್ಯಾಂಟ್ರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಅಡುಗೆ ಮಾಡುವ ಸಮಯದಲ್ಲಿ ಬೋಗಿಯಲ್ಲಿ ಬೆಂಕಿ ವ್ಯಾಪಿಸಿದೆ.

ಈ ದುರ್ಘಟನೆಯಲ್ಲಿ ಮೊದಲು ಇಬ್ಬರು ಸಾವನ್ನಪ್ಪಿದ್ದರೆ, ಇದೀಗ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮೃತರನ್ನು ಉತ್ತರ ಪ್ರದೇಶದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇನ್ನು ಕೆಲವರು ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಹರಡಿದ ಭೋಗಿಯನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸಕಾಲಕ್ಕೆ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಈ ಅವಘಡ ಸಂಭವಿಸಿರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ. ಅಪಘಾತವಾದ ರೈಲಿನಲ್ಲಿ ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿವೆ.ಬೆಂಕಿ ಅವಘಡದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ವರ್ಷ ಜೂನ್ 2 ರಂದು ಒಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತ್ತು. ಕೋರಮಂಡಲ್ ಎಕ್ಸ್ ಪ್ರೆಸ್ ಸೇರಿದಂತೆ ಮೂರು ರೈಲುಗಳು ಡಿಕ್ಕಿ ಹೊಡೆದಿದ್ದವು. ಈ ಘಟನೆ ದೇಶವಷ್ಟೇ ಅಲ್ಲ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಈ ಭೀಕರ ಅಪಘಾತದಲ್ಲಿ 290ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಸಾವಿರಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇದು ದೇಶದ ಇತಿಹಾಸದಲ್ಲಿ ಅತಿದೊಡ್ಡ ರೈಲು ಅಪಘಾತಗಳಲ್ಲಿ ಒಂದಾಗಿದೆ.

