ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಕ್ಕಾಗಿ ಡಿಕೆಶಿ ಎ1 ಆರೋಪಿಯಾಗಿದ್ದಾರೆ ಮತ್ತು ಸಿದ್ದರಾಮಯ್ಯ ಅವರು ಎ2 ಆರೋಪಿಯಾಗಿದ್ದಾರೆ.
ಇತ್ತೀಚೆಗೆ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿ, ಆತ್ಮಹತ್ಯೆಯೂ ಮಾಡಿಕೊಂಡಿದ್ದಾರೆ. ಜೊತೆಗೆ ವಾಟ್ಸಾಪ್ ಸಂದೇಶದ ಮೂಲಕ ನನ್ನ ಸಾವಿಗೆ ನೇರ ಕಾರಣ ಈಶ್ವರಪ್ಪ ಅವರೇ ಎಂದು ಬರೆದಿದ್ದರು. ಈ ಕಾರಣಕ್ಕೆ ಕಾಂಗ್ರೆಸ್ ನಾಯಕರು ಮೊದಲು ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂಬಂಧ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎ1 ಆರೋಪಿ, ಸಿದ್ದರಾಮಯ್ಯ ಎ2, ರಂದೀಪ್ ಸುರ್ಜೇವಾಲ್ ಎ3 ಆರೋಪಿಯಾಗಿದ್ದಾರೆ. ಒಟ್ಟು 30 ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಎ1 ಆದರೂ ಆಗಲಿ, ಎ2 ಆದರು ಆಗಲಿ ನಾವೂ ಎದುರಿಸುತ್ತೇವೆ. ನಾವೂ ಮಾಡಿರುವುದು ಪ್ರತಿಭಟನೆ ಅಷ್ಟೇ, 40% ಕಮಿಷನ್ ಏನು ಕೇಳಿಲ್ಲವಲ್ಲ ಎಂದಿದ್ದಾರೆ.