ಮೈಸೂರು: ನಿನ್ನೆಯಷ್ಟೇ ಈ ಸುದ್ದಿ ಓದಿ ಅದೆಷ್ಟೋ ಜನ ಮನಸ್ಸಿಗೆ ಬಂದಂತೆ ಬೈದುಕೊಂಡವರಿದ್ದೀರಿ. ಹೆಣವನ್ನು ಬಿಡಲ್ಲವಲ್ಲಾ ಈ ನೀಚರು ಎಂದು ಶಾಪ ಹಾಕಿದವರಿದ್ದೀರಿ. ಯಾಕಂದ್ರೆ ಒಂದಷ್ಟು ಸ್ವಂತದವರು ಎನಿಸಿಕೊಂಡವರು ಮಾಡಿದ್ದು ಅಂತ ಮನಸ್ಸಿಗೆ ಆಘಾತವಾಗುವ ಕೆಲಸವೇ. ಆದ್ರೆ ಇಂದು ಅವರ ಮೇಲೆ ಎಫ್ಐಆರ್ ದಾಖಲಾಗಿದೆ.
ಆಸ್ತಿಗಾಗಿ ಹೆಣದ ಹೆಬ್ಬೆಟ್ಟು ಪಡೆದವರ ವಿರುದ್ಧ ವಿದ್ಯಾರಣ್ಯಪುರ ಪೊಲಿಕಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಿನ್ನೆ ಜಯಮ್ಮ ಎಂಬ ವೃದ್ಧೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಆ ವೇಳೆ ಇಂಥದ್ದೊಂದು ಘಟನೆ ನಡೆದಿತ್ತು.
ಮೃತರ ಸಂಬಂಧಿಕರು ಆಕೆಯ ಆಸ್ತಿ ಮೇಲೆ ಕಣ್ಣಾಕಿದ್ದರು. ಅಕ್ಕನ ಮಗ ಸುರೇಶ ಎಂಬಾತ ಆಸ್ತಿ ಕಬಳಿಸಲು ಶವದ ಹೆಬ್ಬಟ್ಟನ್ನ ಪತ್ರದ ಮೇಲೆ ಒತ್ತಿಸಿಕೊಳ್ಳುತ್ತಿದ್ದ. ಅದನ್ನ ಅಲ್ಲಿದ್ದ ಮಹಿಳೆಯೊಬ್ಬರು ಪ್ರಶ್ನಿಸಿದ್ದರು. ಆದ್ರೆ ಸುರೇಶ್ ಆ ಮಹಿಳೆಗೆ ಅವಾಜ್ ಹಾಕಿದ್ದ. ಆ ಮಹಿಳೆ ಅದೆಲ್ಲವನ್ನು ವಿಡಿಯೋ ಮಾಡಿದ್ದರು. ಬಳಿಕ ಪೊಲೀಸ್ ಠಾಣೆಗೆ ತೆರಳಿ, ವಿಡಿಯೋ ತೋರಿಸಿ ದೂರು ದಾಖಲಿಸಿದ್ದರು. ಮಹಿಳೆಯ ದೂರು ದಾಖಲಿಸಿಕೊಂಡು, ವಿಡಿಯೋ ಆಧರಿಸಿ, ಸುರೇಶ್ ಸೇರಿದಂತೆ ಹಲವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.