ಬೆಂಗಳೂರು: ಸೆಪ್ಟೆಂಬರ್ ಕ್ರಾಂತಿ, ನವೆಂಬರ್ ಕ್ರಾಂತಿ ಬಗ್ಗೆ ಜನ ಕುತೂಹಲವಿತ್ತು. ಆದರೆ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಬೆನ್ನಲ್ಲೇ ರಾಜ್ಯದಲ್ಲಿ ಶುರುವಾದದ್ದು, ಸಿಎಂ ಕುರ್ಚಿ ಕಾದಾಟ. ಸಿದ್ದರಾಮಯ್ಯ ಅವರು ಡಿಕೆಶಿಗೆ ತಮ್ಮ ಕುರ್ಚಿಯನ್ನ ಬಿಟ್ಟು ಕೊಡಬೇಕೆಂದು ಒತ್ತಾಯಗಳು ಕೇಳಿ ಬರ್ತಿವೆ. ಇದೀಗ ಒಕ್ಕಲಿಗ ಸಂಘ ಕೂಡ ಎಚ್ಚರಿಕೆಯನ್ನ ನೀಡಿದೆ. ಅದರಲ್ಲೂ ನಾವೂ ಸಿಡಿದೇಳುವ ಮುನ್ನ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ನೀಡಬೇಕೆಂದು ಎಚ್ಚರಿಕೆಯನ್ನ ನೀಡಿದ್ದಾರೆ.
ಒಕ್ಕಲಿಗರ ಸಭೆ ನಡೆದಿದೆ. ಈ ಸಭೆಯಲ್ಲಿ ಸಿಎಂ ಸ್ಥಾನದ ಬಗ್ಗೆಯೂ ಚರ್ಚೆಗಳು ನಡೆದಿವೆ. ಸಭೆ ಬಳಿಕ ಸ್ವಾಮೀಜಿಗಳ ಹೋರಾಟದ ಮುನ್ನವೇ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಮ್ಮ ರಾಜ್ಯ ಮಾತ್ರವಲ್ಲ, ಬೇರೆ ರಾಜ್ಯದಲ್ಲಿಯೂ ಪಕ್ಷ ಸಂಘಟನೆ ಮಾಡಿದ್ದಾರೆ. ಡಿಕೆಗೆ ಅನ್ಯಾಯ, ಮೋಸ ಆಗಬಾರದು. ಸ್ವಾಮೀಜಿಗಳ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಹೋರಾಟ ಮಾಡ್ತೀವಿ ಎಂದು ಗುಡುಗಿದ್ದಾರೆ.
2028ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಡಿಕೆಶಿ ಸಿಎಂ ಆಗಬೇಕು. ಸಿದ್ದರಾಮಯ್ಯ ಅವರೇ, ನೀವೇ ಡಿಕೆ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ. ಡಿಕೆ ಶಿವಕುಮಾರ್ ಹಿಂದೆ ನಡೆದ ಚುನಾವಣೆ ಪ್ರಚಾರದಲ್ಲಿ ನನ್ನ ಕೈಗೆ ಪೆನ್ನು ಪೇಪರ್ ಕೊಡಿ ಎಂದಿದ್ದರು. ಅವರಿಗೆ ಮತಗಳನ್ನು ಕೊಟ್ಟೆವು. ಅಧ್ಯಕ್ಷರಾಗಿ ಶ್ರಮ ಪಟ್ಟು, ಊಟ ನಿದ್ದೆ ಇಲ್ಲದೆ ಒದ್ದಾಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆಯೂ ಅಧಿಕಾರ ಅನುಭವಿಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡಬೇಕು ಎಂದು ಒಕ್ಕಲಿಗ ಸಂಘದ ನೂತನ ಅಧ್ಯಕ್ಷ ಎಲ್ ಶ್ರೀನಿವಾಸ್ ತಿಳಿಸಿದ್ದಾರೆ.






