ದಾವಣಗೆರೆ, ಫೆ. 15 : ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ವಿಶೇಷ ಪರಿಷ್ಕರಣೆ ನಂತರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗಳು ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಮತಗಟ್ಟೆಗಳಲ್ಲಿ ಫೆಬ್ರವರಿ ೧೪ ರಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮತದಾರರ ಪರಿಷ್ಕರಣೆ ಹಾಗೂ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಕುರಿತಂತೆ ಮಾಹಿತಿ ನೀಡಿ ಪ್ರಕಟಿಸಿದರು.
ಮತದಾರರ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ https://ceo.karnataka.gov.in/en ಹಾಗೂ ಪಟ್ಟಿಯನ್ನು ಮತ್ತು ಜಿಲ್ಲಾಧಿಕಾರಿಗಳ ವೆಬ್ಸೈಟ್ಗಳಲ್ಲಿ ಮತದಾರರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರುಗಳನ್ನು ಸರಿಯಾದ ಮಾಹಿತಿಯೊಂದಿಗೆ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂದು ಪರಿಶೀಲಿಸಕೊಳ್ಳಬಹುದು.
107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ, 1,14,165 ಪುರುಷ, 1,18,355 ಮಹಿಳೆಯರು ಹಾಗೂ 44 ತೃತೀಯಲಿಂಗ ಮತದಾರರು ಸೇರಿದಂತೆ ಒಟ್ಟು 2,32,564 ಮತದಾರರಿದ್ದಾರೆ, ಇದರಲ್ಲಿ 2204 ಯುವ ಮತದಾರರು (18-19 ವರ್ಷದವರು), 1 ವಿದೇಶಿ ಮತದಾರರು, 2542 ವಿಕಲಚೇತನ ಮತದಾರರು ಮತ್ತು 85 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು 2157 ಮತದಾರಿದ್ದಾರೆ, ಒಟ್ಟು 217 ಮತಗಟ್ಟೆ ಗಳಿದ್ದು ಹೊಸದಾಗಿ 67 ಮತಗಟ್ಟೆ ಗಳನ್ನು ಸೇರ್ಪಡೆಗೊಳಿಸಿದ್ದು 24 ಮತಗಟ್ಟೆ ಗಳನ್ನು ಬದಲಾವಣೆ ಮಾಡಲಾಗಿ ಒಟ್ಟು ಈಗ 284 ಮತಗಟ್ಟೆಗಳಿವೆ ಎಂದು ತಿಳಿಸಿದರು.
ಅರ್ಹ ಮತದಾರರು ಅರ್ಜಿಗಳನ್ನು ಸಲ್ಲಿಸಲು ತಮ್ಮ ಮೊಬೈಲ್ ಫೋನ್ನಲ್ಲಿ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು. ಅಥವಾ https://voters.eci.gov.in/portal ನಲ್ಲಿಯೂ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ನಿಗದಿತ ನಮೂನೆಗಳಲ್ಲಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳಿಗೆ ಹೊಸ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ 6 ಅರ್ಜಿ, ವಿದೇಶಿ ಭಾರತೀಯ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ನಮೂನೆ 6ಎ ಅರ್ಜಿ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆ/ಹೆಸರು ತೆಗೆದುಹಾಕಲು ಆಕ್ಷೇಪಣೆ ಸಲ್ಲಿಸಲು ನಮೂನೆ 7 ನಮೂನೆ, ನಿವಾಸ ಬದಲಾವಣೆ/ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ನಮೂದುಗಳ ತಿದ್ದುಪಡಿ/ಎಪಿಕ್ ಬದಲಾವಣೆ/ ಭಾವಚಿತ್ರ ಬದಲಾವಣೆ ಇತರೆ ತಿದ್ದುಪಡಿಗೆ ನಮೂನೆ 8 ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಮತದಾರರ ಫೋಟೋ ಗುರುತಿನ ಚೀಟಿಗಳು ಮತ್ತು ಅರ್ಜಿಗಳ ಸಲ್ಲಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿ ಮತ್ತು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು, ಎಲ್ಲಾ ರಾಜಕೀಯ ಪಕ್ಷದವರು ಮತಗಟ್ಟೆ ಮಟ್ಟದ ಏಜೆಂಟರ್ಗಳನ್ನು ನೇಮಕ ಮಾಡಿ, ನೇಮಕ ಮಾಡಿದ ಪ್ರತಿಗಳನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸುವುದು. ರಾಜಕೀಯ ಪಕ್ಷಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಮತದಾರರ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಹಾಗೂ ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸುವಂತೆ ತಿಳಿಸಿದರು.
ಈ ವೇಳೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.


