ಒಳಮೀಸಲಾತಿ ಜಾರಿಗೆ ಅಡ್ಡಿಯಾದರೆ ಹೋರಾಡಿ : ಮಾಜಿ ಸಚಿವ ಆಂಜನೇಯ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಡಿ. 21 : ಒಳಮೀಸಲಾತಿ ಜಾರಿ ವಿಚಾರದಲ್ಲಿ ಯಾರೂ ಆತಂಕ ಪಡಬೇಕಿಲ್ಲವೆಂದು ಹೇಳಿರುವ ಮಾಜಿ ಸಚಿವ ಹೆಚ್.ಆಂಜನೇಯ ಅವರು, ಒಂದು ವೇಳೆ ಮಾದಿಗರ ಹಕ್ಕುಗಳಿಗೆ ಚ್ಯುತಿಯಾದರೆ, ಮೀಸಲಾತಿಗೆ ಅಡ್ಡಿಯಾದರೆ ಎಲ್ಲರೂ ಬೀದಿಗೆ ಬಂದು ಹೋರಾಡಿ ಎಂದು ಕರೆ ನೀಡಿದರು.

 

ಇಲ್ಲಿನ ಲೀಡ್ಕರ್ ಭವನದಲ್ಲಿ ಭಾನುವಾರದಂದು ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘ ಹಮ್ಮಿಕೊಂಡಿದ್ದ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ವಲಯ ಮುಖ್ಯ ಇಂಜಿನೀಯರ್ ಕೆ.ಜಿ.ಜಗದೀಶ್ ಹಾಗೂ ನಿವೃತ್ತ ಶಿಕ್ಷಕ ವೀರಣ್ಣ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

 

ಮಾದಿಗರಿಗೆ ಒಳಮೀಸಲಾತಿ ಸಿಗಬೇಕು ಎನ್ನುವ ವಿಚಾರದಲ್ಲಿ ಸುಮಾರು 25 ವರ್ಷಗಳ ಕಾಲ ಹೋರಾಟ ನಡೆದಿದೆ. ಎಲ್ಲಾ ನಾಯಕರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಇದೀಗ ಒಳ ಮೀಸಲಾತಿ ಜಾರಿಯಾಗಿದ್ದು, ಇನ್ನೂ ಕೆಲವು ತಾಂತ್ರಿಕ ದೋಷಗಳಿವೆ. ಅದನ್ನು ಸರ್ಕಾರ ಸರಿ ಮಾಡಲಿದೆ. ಮಾದಿಗರಿಗೆ ಒಳಮೀಸಲಾತಿ ಜಾರಿ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ, ಆತಂಕವೂ ಪಡಬೇಕಿಲ್ಲವೆಂದು ನುಡಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ವಿಚಾರದಲ್ಲಿ ಬದ್ದತೆಯಿದೆ. ಸಮಾಜಿಕ ನ್ಯಾಯದ ಪರವಾಗಿ ಇರುವ ಸಿದ್ದರಾಮಯ್ಯ ಅವರ ವಿರುದ್ದ ಕೆಲವರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಇದು ತರವಲ್ಲದ ನಡವಳಿಕೆ. ನಮಗೆ ನಂಬಿಕೆಯಿದೆ. ಭರವಸೆಯೂ ಇದೆ. ಒಂದು ವೇಳೆ ಅಂತಹ ಅಡ್ಡಿ ಆತಂಕ ಸೃಷ್ಠಿಯಾದರೆ ಎಲ್ಲಾ ಮಾದಿಗರ ಜೊತೆಗೆ ಸರ್ಕಾರಿ ನೌಕರರೂ ಸಹ ಬೀದಿಗೆ ಬಂದು ಹೋರಾಟ ಮಾಡೋಣ ಎಂದು ಹೇಳಿದರು.

 

ಜಿಲ್ಲೆಯಲ್ಲಿ ಮೂರು ದಶಕಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಕೆ.ಜಿ.ಜಗದೀಶ್ ಸತತವಾಗಿ ನಾಲ್ಕು ಬಾರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಾ ಜಾತಿ, ಸಮುದಾಯದ ಜೊತೆಗೆ ಉತ್ತಮ ಬಾಂಧ್ಯವವಿಟ್ಟುಕೊಂಡು ಬಂದಿರುವ ಅವರಿಗೆ ರಾಜಕಾರಣದ ಕಡೆ ಒಲವು ಇದ್ದಂತೆ ಕಾಣುತ್ತಿದೆ. ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ದಿಸಿದರೆ ನಾನು ಖಂಡಿತವಾಗಿಯೂ ಬೆಂಬಲಿಸುತ್ತೇನೆ ಎಂದು ಹೆಚ್.ಆಂಜನೇಯ ಘೋಷಿಸಿದರು.

 

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಮಾದಿಗ ಸಮಾಜ ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ಕೆಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ಮಾದಿಗ ಜನಾಂಗದ ಹಿರಿಯರಾದ ಕೆ.ಹೆಚ್.ಮುನಿಯಪ್ಪ ಹಾಗೂ ಹೆಚ್.ಆಂಜನೇಯ ಅವರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆದಿದೆ. ಈ ಇಬ್ಬರೂ ನಾಯಕರಿಂದ ಇದೀಗ ಈ ಸಮಾಜಕ್ಕೆ ದೊಡ್ಡ ಲಾಭವಾಗಿದೆ. ನ್ಯಾಯವೂ ಸಿಕ್ಕಿದೆ ಎಂದರು.

ಹಳ್ಳಿಯಿಂದ ಬಂದ ಕೆ.ಜಿ.ಜಗದೀಶ್ ಅವರು ಹಂತ ಹಂತವಾಗಿ ವಿವಿಧ ಇಲಾಖೆಗಳಲ್ಲಿ ಇಂಜಿನಿಯರ್ ಆಗಿ ಸೇವೆಸಲ್ಲಿಸಿ ಇದೀಗ ಉನ್ನತ ಸ್ಥಾನವಾದ ಮುಖ್ಯ ಇಂಜಿನೀಯರ್ ಹುದ್ದೆಯನ್ನೂ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಅವರ ಭವಿಷ್ಯದ ರಾಜಕೀಯ ಹಾದಿ ಸುಗಮವಾಗಲಿ ಎಂದು ಹಾರೈಸಿದರು.

ಕರ್ನಾಟಕ ಪರೀಕ್ಷಾ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಎಂ.ರೇವಣಸಿದ್ದಪ್ಪ ಮಾತನಾಡಿ, ಚಾರಿತ್ರಿಕ ಹಿನ್ನಲೆಯ ಈ ಜಿಲ್ಲೆಯಲ್ಲಿ ಕೆ.ಜಿ.ಜಗದೀಶ್ ಅವರು ನಿಜಕ್ಕೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜನಸಾಮ್ನಯರು ಮತ್ತು ಸರ್ಕಾರಿ ನೌಕರರ ಮನಸ್ಸನ್ನೂ ಗೆದ್ದಿದ್ದಾರೆ. ನಿಜಕ್ಕೂ ಅವರೊಬ್ಬ ಜನನಾಯಕ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಇಂಜಿನೀಯರ್ ಕೆ.ಜಿ.ಜಗದೀಶ್ ನಾನು ಇದೇ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು. ಸುಮಾರು 25 ವರ್ಷಗಳ ಕಾಲ ವಿವಿಧ ಇಲಾಖೆಯಲ್ಲಿ ಸೇವೆಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ಎಲ್ಲಾ ಜಾತ,ಧರ್ಮದ ನೌಕರರನ್ನೂ ಒಟ್ಟಿಗೆ ಕರೆದೊಯ್ದು ಸರ್ಕಾರಿ ನೌಕರರ ಸಂಘದಲ್ಲಿ ಗುರುತರವಾದ ಕೆಲಸವನ್ನೂ ಮಾಡಿದ್ದೇನೆ ಎಂದರು.

ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸಮಾರಂಭದ ಸಾನಿದ್ಯವಹಿಸಿ ಮಾತನಾಡಿದರು. ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಜಿಲ್ಲಾ ಅಧಿಕಾರಿ ಡಿ.ಟಿ.ಜಗನ್ನಾಥ್,ವಾಣಿಜ್ಯ  ತೆರಿಗೆ ಇಲಾಖೆಯ ಅಧಿಕಾರಿ ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಖಜಾಂಚಿ ಎ.ಮಲ್ಲಿಕಾರ್ಜುನ್, ಡಿವೈಎಸ್ಪಿ ಶಾಂತವೀರಯ್ಯ, ಪೊಲೀಸ್ ಇಲಾಖೆ ನಿವೃತ್ತ ಅಧಿಕಾರಿ ನಾಗರಾಜ್, ಮಾದಿಗ ನೌಕರರ ಸಾಂಸ್ಕøತಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ, ಖಜಾಂಚಿ ರುದ್ರಮುನಿ ,ವೈಜ್ಷಾನಿಕ ಸಂಶೋದನಾ ಪರಿಷತ್ ಜಿಲ್ಲಾಧ್ಯಕ್ಷೆ ಬಿ.ಟಿ.ಲೋಲಾಕ್ಷಮ್ಮ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.

Share This Article
Enable Notifications OK No thanks