ದಾವಣಗೆರೆ: ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ. ದಾವಣಗೆರೆಯಲ್ಲೂ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗುತ್ತಿದೆ. ಕಾಂಗ್ರೆಸ್ ನಲ್ಲಿ ಸಚುವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ನ ಸಂಸ್ಥಾಪಕ ವಿನಯ್ ಕುಮಾರ್ ಅವರ ಹೆಸರು ಹೆಚ್ಚು ಪ್ರಚಲಿತವಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಯುವ ನಾಯಕ ನಿಖಿಲ್ ಕೊಂಡಜ್ಜಿ ಹೆಸರು ತೆರೆಮರೆಯಲ್ಲಿ ಓಡಾಡುತ್ತಿದೆ.
ಇತ್ತ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿನಯ್ ಕುಮಾರ್, ಈಗಾಗಲೇ ಪ್ರಚಾರ ಕಾರ್ಯದಲ್ಲೂ ತೊಡಗಿಕೊಂಡಿದ್ದಾರೆ. ಕುರುಬ ಸಮುದಾಯದವರೇ ಆಗಿರುವ ವಿನಯ್ ಕುಮಾರ್ ಅವರು, ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೂ ಈಗಾಗಲೇ ಟಿಕೆಟ್ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ದಾವಣಗೆರೆಯಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ.
ಇನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಸ್ಥರಲ್ಲಿಯೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಶಿವಶಂಕರಪ್ಪ ಅವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ಕಾರ್ಯ ಆರಂಭಿಸಿದ್ದಾರೆ. ಕುಟುಂಬಸ್ಥರಿಂದ ಈಗಾಗಲೇ ಟಿಕೆಟ್ ಗಾಗಿ ಲಾಭಿ ನಡೆಯುತ್ತಿದೆ. ಈ ಸಂಬಂಧ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಟಿಕೆಟ್ ಗೆ ತಲೆಕೆಡಿಸಿಕೊಂಡಿಲ್ಲ. ಮನೆ ಮನೆಗೆ ಆರೋಗ್ಯ ಸೇವೆ ನೀಡಬೇಕು ಎಂಬ ಕಲ್ಪನೆಯೊಂದಿಗೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಪಾಗುತ್ತಿದೆ. ಲೋಕಸಭಾ ಚುನಾವಣೆಯ ಅಜೆಂಡಾ ಇಟ್ಟುಕೊಂಡು ಈ ಕೆಲಸಗಳನ್ನು ಮಾಡುತ್ತಿಲ್ಲ ಎಂದಿದ್ದಾರೆ.