ದಾವಣಗೆರೆ: ಈಗಿನ ಕಾಲದಲ್ಲಿ ಒಂದು ರೂಪಾಯಿ ದಾನವಾಗಿ ಕೊಡಬೇಕೆಂದಾಗಲೂ ಸಾವಿರ ಸಲ ಯೋಚನೆ ಮಾಡುತ್ತಾರೆ. ಅಂತದ್ರಲ್ಲಿ ಆ ವೃದ್ದೆ ತನ್ನ ಜಾಗವನ್ನೇ ದಾನವಾಗಿ ಬರೆದುಕೊಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಸುಶೀಲಮ್ಮ ಎನ್ನುವವರು ತನ್ನ ಜಾಗವನ್ನ ಅಂಗನವಾಡಿಗಾಗಿ ನೀಡಿ, ಮಾದರಿಯಾಗಿದ್ದಾರೆ. ಅಜ್ಜಿಯ ಈ ಮಹತ್ಕಾರ್ಯಕ್ಕೆ ಇಡೀ ಗ್ರಾಮವೇ ಕೊಂಡಾಡಿದೆ.
ಸುಶೀಲಮ್ಮ ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದವರು. ಈ ಗ್ರಾಮದಲ್ಲಿ ಅಂಗನವಾಡಿಯೊಂದಿದೆ. ಆದರೆ ಸರಿಯಾದ ವ್ಯವಸ್ಥೆ ಇಲ್ಲ. ಮಳೆ ಬಂದರೆ ಅಂಗನವಾಡಿ ಕೇಂದ್ರ ಸೋರುತ್ತದೆ. ಅದರಲ್ಲಿಯೇ ಮಕ್ಕಳಿಗೆ ಆಟ, ಪಾಠ ಎಲ್ಲವೂ. ಇದನ್ನ ಗಮನಿಸಿದ್ದ ಸುಶೀಲಮ್ಮ ತಮ್ಮ ಕುಟುಂಬಸ್ಥರ ಜೊತೆಗೆ ಚರ್ಚೆ ಮಾಡಿ, ಅಂಗನವಾಡಿಗೆಂದು ತಮ್ಮಲ್ಲಿದ್ದ ಜಾಗವನ್ನೇ ಬರೆದುಕೊಟ್ಟಿದ್ದಾರೆ. ಆದರೆ ವಿಪರ್ಯಾಸವೇನೆಂದರೆ ಸುಶೀಲಮ್ಮ ಅವರಿಗೆ ಇರುವುದಕ್ಕೆಂದು ಸ್ವಂತ ಸೂರು ಇಲ್ಲ. ಬಾಡಿಗೆ ಮನೆಯಲ್ಲಿದ್ದಾರೆ. ಆದರೂ ಮಕ್ಕಳಿಗಾಗಿ ಇವರ ಮನ ಮಿಡಿದಿದ್ದು ಗ್ರೇಟ್.
ಪಂಚಾಯ್ತಿ ಮೂಲಕ ಈ ಜಾಗವನ್ನ ಅಂಗನವಾಡಿಗೆ ಬರೆದುಕೊಡಲಾಗಿದೆ. ಈ ಜಾಗದಲ್ಲಿ 17 ಲಕ್ಷ ಖತ್ಚು ಮಾಡಿ, ಅದ್ಭುತವಾಗಿ ಅಂಗನವಾಡಿಯನ್ನು ಕಟ್ಟಲಾಗಿದೆ. ಇದು ಸುಶೀಲಮ್ಮ ಅವರ ಆಸೆಯಾಗಿತ್ತಂತೆ. ಅಂಗನವಾಡಿ ಮಕ್ಕಳಿಗೆ ಒಂದೊಳ್ಳೆ ವಾತಾವರಣ ನಿರ್ಮಾಣವಾಗಿದ್ದು, ಅದರಲ್ಲಿ ಮಕ್ಕಳು ನೆಮ್ಮದಿಯಿಂದ ಪಾಠ ಕಲಿಯುತ್ತಾರಲ್ವಾ ಅದನ್ನು ನೋಡಿನೆ ನಮಗೆ ಸಂತಸವಾಗುತ್ತೆ ಎಂದು ಸುಶೀಲಮ್ಮ ಹೇಳಿದ್ದಾರೆ. ಒಂದೂವರೆ ಗುಂಟೆ ಜಾಗವನ್ನು ಅಂಗನವಾಡಿಗೆ ನೀಡಿರುವ ಸುಶೀಲಮ್ಮ, ತಮಗೆ ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮನಃಪೂರ್ವಕವಾಗಿ ಹಾರೈಸಿದ್ದಾರೆ. ಇಂಥ ಹಾರೈಕೆ, ಇಂಥ ಒಳ್ಳೆಯ ಗುಣ ಎಲ್ಲರಿಗೂ ಸಿಗಲ್ಲ, ಎಲ್ಲರಿಗೂ ಬರಲ್ಲ. ಆ ಗ್ರಾಮದ ಅಂಗನವಾಡಿ ಮಕ್ಕಳೇ ಅದೃಷ್ಟವಂತರು.
