ರಾಜ್ಯದಲ್ಲಿ ಮಳೆ ನಿಲ್ಲುತ್ತಲೇ ಇಲ್ಲ. ಒಂದೇ ಸಮನೇ ಮಳೆ ಸುರಿಯುತ್ತಲೆ ಇದೆ. ಮಳೆಯಿಂದಾಗಿ ಬೆಳೆ ನೆಲ ಕಚ್ಚುತ್ತಿದೆ. ಇದರಿಂದಾಗಿ ಹಲವು ಬೆಳೆಯಲ್ಲಿ ಬೆಲೆ ಏರಿಕೆಯಾಗುತ್ತಿದೆ. ಇದರ ಜೊತೆಗೆ ಜಲಾಶಯಗಳು ತುಂಬುತ್ತಿವೆ. ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿರುವ ವಾಣಿ ವಿಲಾಸ ಜಲಾಶಯ ತುಂಬುವುದಕ್ಕೆ ಇನ್ನು ಕೆಲವೇ ಅಡಿಗಳು ಬಾಕಿ ಇದೆ. ಇದು ಕೋಟೆ ನಾಡು ಜನರ ಏಕೈಕ ಜೀವನಾಡಿಯಾಗಿದೆ. ಈಗ ಕೋಡಿ ಬೀಳುವ ಲಕ್ಷಣ ಕಾಣಿಸಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.
ಮಂಗಳವಾರ ರಾತ್ರಿ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಸೆಳೆತ ಜಾಸ್ತಿಯಾಗಿದೆ. ಈ ಮೂಲಕ ಮಂಗಳವಾರ ಒಂದೇ ದಿನ 4,852 ಕ್ಯೂಸೆಕ್ ಒಳಹರಿವು ಹರಿದು ಬಂದಿದೆ. ಇದರಿಂದ ಜಲಾಶಯದ ನೀರಿನ ಮಟ್ಟ 125 ಅಡಿಗೆ ತಲುಪಿದೆ. ಯಾಕಂದ್ರೆ ಜಲಾಶಯದ ಕೋಡಿ ಬೀಳಲು ಕೇವಲ 5 ಅಡಿ ಮಾತ್ರ ಬಾಕಿ ಇದೆ. 130 ಅಡಿಗೆ ಜಲಾಶಯ ಕೋಡಿ ಬೀಳಲಿದೆ.
ಜಲಾಶಯದಲ್ಲಿ ನೀರಿನ ಮಟ್ಟ ಜಾಸ್ತಿ ಇರುವ ಕಾರಣ ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮೂರು ಜನತೆಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗುತ್ತದೆ. ಮುಖ್ಯವಾಗಿ ಬೇಸಿಗೆ ಕಾಲಕ್ಕೆ ಎಡ ಮತ್ತು ಬಲಭಾಗದ ರೈತರ ಜಮೀನುಗಳಿಗೆ ನೀರು ಹರಿಯಲಿದೆ. ಬೇಸಿಗೆಯಲ್ಲೂ ಸಂಪಾದ ಹಸಿರು ಹುಲ್ಲು, ಬೆಳೆ ಸಿಗಲಿದೆ. ಇದರಿಂದ ಜನ ಜಾನುವಾರುಗಳ ದಾಹ ತೀರಿದಂತೆ ಆಗುತ್ತದೆ. 1935ರಲ್ಲಿ ಮೊದಲ ಕೋಡಿ ಬಿದ್ದಿತ್ತು. ಬಳಿಕ 2022 ರಲ್ಲಿ. ಕಳೆದ ವರ್ಷ ಮಳೆಯಿಲ್ಲದೆ ಜಲಾಶಯದಲ್ಲಿ ನೀರು ಕಡಿಮೆ ಇತ್ತು. ಈ ಬಾರಿಯೂ ಕೋಡಿ ಬಿದ್ದರೆ ಮೂರನೇ ಬಾರೀ ಬಿದ್ದಂತೆ.