ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್.28 : ಶಾಂತಿ ಧೂತ ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಗುರುವಾರ ನಗರದಲ್ಲಿ ಈದ್‍ಮಿಲಾದ್ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಬಡಾಮಕಾನ್‍ನಿಂದ ಹೊರಟ ಮೆರವಣಿಗೆ ಬಸವೇಶ್ವರ ಚಿತ್ರಮಂದಿರದ ಮುಂಭಾಗದಿಂದ ಆಜಾದ್‍ನಗರ, ಹಿಮ್ಮತ್‍ನಗರ, ಹೊರಪೇಟೆ, ಉಮರ್ ಸರ್ಕಲ್, ಎಸ್.ಬಿ.ಎಂ. ವೃತ್ತ, ಗಾಂಧಿವೃತ್ತ, ದೊಡ್ಡಪೇಟೆ, ಕೋಳಿಬುರುಜನಹಟ್ಟಿ, ಆಲಿಮೊಹಲ್ಲಾ, ಅಗಸನಕಲ್ಲು ಮುಖಾಂತರ ಮಂಡಕ್ಕಿಭಟ್ಟಿಯಲ್ಲಿರುವ ಮಸೀದಿಗೆ ತಲುಪಿದಾಗ ಪ್ರಾರ್ಥನೆ ಸಲಿಸಿ ಸಂಜೆ ಗಾಂಧಿವೃತ್ತದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.
ಹಸಿರು ಬಳಿ ಕಪ್ಪು ಬಣ್ಣದ ಭಾವುಟಗಳನ್ನು ಕೈಯಲ್ಲಿ ಹಿಡಿದು ಸಾಗುತ್ತಿದ್ದ ಮುಸ್ಲಿಂ ಯುವಕರು ಅಲ್ಲಲ್ಲಿ ಭಾವುಟಗಳನ್ನು ತಿರುಗಿಸಿ ಖುಷಿ ಪಡುತ್ತಿದ್ದರೆ ಇನ್ನು ಕೆಲವರು ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದರು. ಮೈಸೂರು ಹುಲಿ ಟಿಪ್ಪುಸುಲ್ತಾನ್, ಚಾಂದ್ ಚಿತ್ರವಿರುವ ಭಾವುಟಗಳು ಮೆರವಣಿಗೆಯಲ್ಲಿ ರಾರಾಜಿಸಿದವು.
ಜಟಕಾಬಂಡಿ, ಎತ್ತಿನಗಾಡಿಗಳನ್ನು ಹೂವು ಹಾರಗಳಿಂದ ಅಲಂಕರಿಸಿ ಚಾಂದಿನಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ನೂರಾರು ದ್ವಿಚಕ್ರ ವಾಹನಗಳಲ್ಲಿ ಕುಳಿತು ಭಾವುಟಗಳನ್ನು ಹಿಡಿದು ನಗರದೆಲ್ಲೆಡೆ ಸಂಚರಿಸಿ ಈದ್‍ಮಿಲಾದ್ ಹಬ್ಬದ ಸಂಭ್ರಮದಲ್ಲಿ ಯುವಕರು ಮಿಂದೆದ್ದರು. ಕುದುರೆ ಹಾಗೂ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಮೆರವಣಿಗೆಯಲ್ಲಿದ್ದವರೆಲ್ಲಾ ತಲೆಯ ಮೇಲೆ ಬಿಳಿ ಟೋಪಿಗಳನ್ನು ಧರಿಸಿದ್ದರೆ ಇನ್ನು ಕೆಲವರು ಬಿಸಿಳ ಝಳಕ್ಕೆ ಬಣ್ಣದ ಬಣ್ಣದ ಪೇಟಗಳನ್ನು ಸುತ್ತಿಕೊಂಡು ಮೆರವಣಿಗೆಯಲ್ಲಿ ಹೊರಟರು.
ಗಾಂಧಿವೃತ್ತ, ಹೊರಪೇಟೆ, ಉಮರ್ ಸರ್ಕಲ್, ಆಜಾದ್ ನಗರ, ಹಿಮ್ಮತ್‍ನಗರ ಸೇರಿದಂತೆ ಅನೇಕ ಕಡೆ ಹಸಿರು ಹಾಗೂ ಬಿಳಿ ಬಟ್ಟೆಗಳನ್ನು ಸುತ್ತಿ ಅಲಂಕರಿಸಲಾಗಿತ್ತು. ರಸ್ತೆ ಮಧ್ಯದಲ್ಲಿರುವ ಡಿವೈಡರ್‍ಗಳಿಗೆ ಸೀರಿಯಲ್ ಲೈಟ್‍ಗಳನ್ನು ಅಳವಡಿಸಲಾಗಿತ್ತು. ಹಬ್ಬದ ಶುಭಾಷಯಗಳನ್ನು ಕೋರುವ ಗಣ್ಯರ ಫ್ಲೆಕ್ಸ್, ಬ್ಯಾನರ್, ಕಟೌಟ್‍ಗಳು ಅಲ್ಲಲ್ಲಿ ರಾರಾಜಿಸುತ್ತಿದ್ದವು. ಮೆರವಣಿಗೆ ನಡುವೆಯೇ ಗಾಂಧಿವೃತ್ತದ ಕಡೆಯಿಂದ ಸೈರನ್ ಹಾಕಿಕೊಂಡು ಬಂದ ಅಂಬ್ಯುಲೆನ್ಸ್‍ಗೆ ದಾರಿ ಮಾಡಿಕೊಟ್ಟ ಮುಸಲ್ಮಾನರು ಮಾನವೀಯತೆ ಮೆರೆದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಡಾ.ಟಿಪ್ಪುಖಾಸಿಂ ಆಲಿ, ಹೆಚ್.ಶಬ್ಬೀರ್‍ಭಾಷ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್(ಎಂ.ಸಿ.ಓ.ಬಾಬು) ಉಪಾಧ್ಯಕ್ಷ ನಯಾಜ್‍ಭಾಷ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ಲಾ, ನಗರಸಭೆ ಮಾಜಿ ಉಪಾಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಶಿಕ್ಷಣ ಇಲಾಖೆಯ ನಿವೃತ್ತ ನೌಕರ ಸೈಯದ್ ಅಫಾಖ್ ಅಹಮದ್, ಸೈಯದ್ ಖುದ್ದೂಸ್, ಚೋಟು, ಮುತುವಲ್ಲಿಗಳು, ಖಾಜಿಗಳು, ಮದರಸಾದ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪುಟ್ಟ ಪುಟ್ಟ ಮಕ್ಕಳು ವಯಸ್ಸಾದವರು ಗಾಡಿಗಳಲ್ಲಿ ಕುಳಿತು ಮೆರವಣಿಗೆಲ್ಲಿ ಸಾಗಿದರು. ಗಾಂಧಿ ವೃತ್ತ ಸೇರಿದಂತೆ ಅಲ್ಲಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಮನುಕುಲಕ್ಕೆ ಶಾಂತಿಯ ಸಂದೇಶ ಸಾರಿರುವ ಪ್ರವಾದಿ ಮಹಮದ್ ಪೈಗಂಬರ್‍ರವರ ಜನ್ಮ ದಿನದ ಅಂಗವಾಗಿ ಗುರುವಾರ ಆಚರಿಸಲಾದ ಈದ್‍ಮಿಲಾದ್ ಹಬ್ಬದಂದು ಆರ್.ಎಂ.ಡಿ.ಆಯಿಲ್ ಇಂಡಸ್ಟ್ರಿಸ್ ಮಾಲೀಕರಾದ ಹಾಜಿ ಆರ್.ದಾದಾಪೀರ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದರು.
ಡಾ.ರಹಮತ್‍ವುಲ್ಲಾ, ಜುಬೇರ್ ಅನ್ಸಾರಿ, ಅಕ್ಬರ್, ಅಫೀಜ್‍ರೆಹಮಾನ್, ಇರ್ಫಾನ್, ನ್ಯಾಯವಾದಿ ಸಿರಾಜ್, ಪ್ರಭಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್, ನಿವಾಸಿ ವೈದ್ಯಾಧಿಕಾರಿ ಡಾ.ಆನಂದಪ್ರಕಾಶ್ ಈ ಸಂದರ್ಭದಲ್ಲಿದ್ದರು.