ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ: ದೇವರ ಅನುಗ್ರಹವಿದ್ದರೆ ಎಂತಹ ಆತಂಕವನ್ನಾದರೂ ದೂರ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ ಶ್ರೀಚಕ್ರ ಪ್ರತಿಷ್ಠಾ ದಶಮಾನೋತ್ಸವ ಗುರುಭಿಕ್ಷಾ ವಂದನ ಮತ್ತು ಶತಚಂಡಿಕಾ ಯಾಗದ ಸಾನಿಧ್ಯ ವಹಿಸಿ ಶನಿವಾರ ಆಶೀರ್ವಚನ ನೀಡಿದರು.
ಕಳೆದ ಎರಡು ವರ್ಷಗಳಿಂದಲೂ ಇಡೀ ವಿಶ್ವವೇ ಕೊರೋನಾ ಭಯದಲ್ಲಿತ್ತು. ಎಲ್ಲಾ ಆತಂಕಗಳನ್ನು ದೂರಮಾಡಿಕೊಳ್ಳಬೇಕಾದರೆ ಜಗನ್ಮಾತೆ ಪೂಜೆ, ಪ್ರಾರ್ಥನೆ ತುಂಬಾ ಮುಖ್ಯ. ಮೂರನೇ ಅಲೆಯೂ ಕಾಣಿಸಿಕೊಂಡಿದೆ. ಈಗ ಸ್ವಲ್ಪ ಕಡಿಮೆಯಾಗಿದೆ ಎಂದರೆ ಅದಕ್ಕೆ ದೇವರ ಅನುಗ್ರಹವಿದೆ ಎಂದರ್ಥ.
ಮೊದಲನೆ ಅಲೆ ಕಾಣಿಸಿಕೊಂಡಾಗ ಆರುವರೆ ತಿಂಗಳುಗಳ ಕಾಲ ನಮ್ಮ ಮಹಾಸಂಸ್ಥಾನದಲ್ಲಿ ನವ ಚಂಡಿಕಾ ಹೋಮ ನಡೆಸಿದೆವು. ಆಗ ಕೊರೋನಾಗೆ ಲಸಿಕೆ ಕಂಡು ಹಿಡಿಯಲಾಗಿದೆ ಎನ್ನುವ ವಿಚಾರವನ್ನು ಭಾರತ ಜನತೆಗೆ ನೀಡಿತು. ದೇವರ ಅನುಗ್ರಹದಿಂದ ಕೊರೋನಾದಿಂದ ಪಾರಾಗಿದ್ದೇವೆ. ಆಲಸ್ಯ ಉದಾಸೀನ ಮಾಡದೆ ಪ್ರತಿಯೊಬ್ಬರು ಯೋಗ, ಪ್ರಾಣಾಯಾಮ ಮಾಡಲೇಬೇಕು. ಸೂರ್ಯ ನಮಸ್ಕಾರ ಅತ್ಯವಶ್ಯಕ. ಒಂದು ವೇಳೆ ಸೋಂಕು ತಗುಲಿದರೂ ಗುಣಪಡಿಸಿಕೊಳ್ಳಬಹುದು.
ಅಂತಹ ಶಕ್ತಿ ಇದಕ್ಕಿದೆ. ಆರೋಗ್ಯ ಸಿದ್ದಿಗೆ ಸೂರ್ಯ, ಐಶ್ವರ್ಯಕ್ಕೆ ಲಕ್ಷ್ಮೀ, ಜ್ಞಾನಕ್ಕೆ ಶಿವ, ವಿಘ್ನಗಳ ನಿವಾರಣೆಗೆ ವಿನಾಯಕ, ಮೋಕ್ಷಕ್ಕೆ ವಿಷ್ಣು ಇವಿಷ್ಟು ಪೂಜೆ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವುದು ಪುಣ್ಯದ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ ಎಲ್ಲರಿಗೂ ದೈವಾನುಗ್ರಹ ಬೇಕೆ ಬೇಕು. ಕಣ್ಣಿಗೆ ಕಾಣದ ಅಗೋಚರ ಶಕ್ತಿಯಿಂದ ಎಲ್ಲವೂ ಸಾಧ್ಯ. ಉಸಿರು ಹೇಗೆ ಕಣ್ಣಿಗೆ ಕಾಣುವುದಿಲ್ಲವೋ ಅದೇ ರೀತಿ ಎಲ್ಲವನ್ನು ಸಲಹುವ ಭಗವಂತ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಗುರುಗಿಂತ ದೊಡ್ಡ ಶಕ್ತಿ ಬೇರೊಂದಿಲ್ಲ. ಗುರುಸೇವೆಯನ್ನು ಭಕ್ತಿಯಿಂದ ಮಾಡಿದರೆ ಸಕಲ ಸಂಪತ್ತು, ಆರೋಗ್ಯ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ನಾಗರಾಜ ಭಟ್‌ರವರು ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸೇವೆ ಮಾಡುತ್ತಿದ್ದಾರೆಂದು ಗುಣಗಾನ ಮಾಡಿದರು.
ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನ ಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮೀಜಿ ಮಾತನಾಡಿ ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕಾದರೆ ದೈವಶಕ್ತಿ ಬೇಕು. ಮನಸ್ಸಿಗೆ ಆನಂದವಾಗುವ ವಾತಾವರಣದಲ್ಲಿ ರಾಜರಾಜೇಶ್ವರಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಮನುಷ್ಯನ ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ದೇವಿಯ ಉಪಾಸನೆ ಮಾಡಬೇಕು. ಪಂಚೇಂದ್ರಿಯಗಳನ್ನು ಕೆಟ್ಟದಕ್ಕೆ ಉಪಯೋಗಿಸಿಕೊಳ್ಳುವವರು ಬೇಗನೆ ಅವನತಿಯಾಗುತ್ತಾರೆ. ಅದೇ ಒಳ್ಳಯದಕ್ಕೆ ಬಳಸುವವರು ಪುಣ್ಯಪುರುಷರಾಗುತ್ತಾರೆ.
ಉಪಾಸನೆ ಎಲ್ಲಾ ಶಕ್ತಿಯ ಪೀಠಗಳಲ್ಲಿ ನಡೆಯಬೇಕು. ರಾಜರಾಜೇಶ್ವರಿ ದೇವಸ್ಥಾನದಲ್ಲಿ ಉಪಾಸನೆಯ ಶಕ್ತಿಯಿದೆ. ಭಗವಂತ ಆನಂದ ಸ್ವರೂಪ. ಅವನ ಸೇವೆ ಯಾರು ಮಾಡುತ್ತಾರೋ ಅವರುಗಳು ದುಃಖವನ್ನು ದೂರ ಮಾಡಿಕೊಂಡು ಸದಾ ಆನಂದವಾಗಿರುತ್ತಾರೆಂದರು.
ಕಲಿಯುಗದಲ್ಲಿ ಮನುಷ್ಯನ ಆಯಸ್ಸಿನ ಪರಿಮಿತಿ ಕಡಿಮೆ. ದೇವರ ಪ್ರತಿಮೆ, ಯಂತ್ರ, ನಾಮದಲ್ಲಿ ಸ್ಮರಣೆ, ಜಪ ಮಾಡಿದರೆ ಸಾಕು. ಇದಕ್ಕೆ ಮಡಿ ಮೈಲಿಗೆಯಿಲ್ಲ. ಭಕ್ತಿಯಿದ್ದರೆ ಯಾರು ಬೇಕಾದರೂ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಹಣವಿದ್ದ ಎಲ್ಲರೂ ದೇವಸ್ಥಾನ ಕಟ್ಟಲು ಆಗಲ್ಲ. ಗೋವುಗಳನ್ನು ಸಾಕುವುದು ಸುಲಭವಲ್ಲ. ಅನ್ನದಾನ ಮಾಡುವುದಕ್ಕೂ ಪುಣ್ಯವಿರಬೇಕು. ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಮೂರು ಕಾರ್ಯಗಳು ನಡೆಯುತ್ತಿದೆ ಎಂದರೆ ಕಡಿಮೆ ಸಾಧನೆಯಲ್ಲ ಎಂದು ಪ್ರಶಂಶಿಸಿದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಕಾಶಿವಿಶ್ವನಾಥಶೆಟ್ಟಿ, ಹರಿ ಹ್ಯಾಂಡ್‌ಲೂಮ್‌ನ ಬಾಬುಲಾಲ್, ಶಿರಸಿ ಸ್ವರ್ಣವಲ್ಲಿ ಮಠದ ಆಸ್ಥಾನ ವಿದ್ವಾಂಸ ಭಾಲಚಂದ್ರಶಾಸ್ತಿç, ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ನ ಅಧ್ಯಕ್ಷ ನಾಗರಾಜ ಭಟ್ ವೇದಿಕೆಯಲ್ಲಿದ್ದರು.