ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ಫೆ.04) : ಶ್ರೀ ತುಳಜಾ ಭವಾನಿ ದೇವಾಸ್ಥಾನ ಸೇವಾ ಟ್ರಸ್ವ್ ವತಿಯಿಂದ ಫೆ. 5 ರಿಂದ 9 ರವರೆಗೆ ಲಕ್ಷ್ಮೀ ಸಾಗರ ಗೇಟ್ ಎದುರು ನಿರ್ಮಾಣ ಮಾಡಿರುವ ತುಳಜಾ ಭವಾನಿ ದೇವಿ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶೀ ಸಂತೋಷ್ ಮಹಳದ್ಕರ್ ತಿಳಿಸಿದರು.
ನಗರದಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ 3 ವರ್ಷದ ಹಿಂದೆ ನಮ್ಮ ಮನೆತನದ ಭೂಮಿ ಲಕ್ಷ್ಮೀಸಾಗರ ಗೇಟ್ ಬಳಿ ಇದ್ದು ಅದನ್ನು ದೇವಾಲಯ ನಿರ್ಮಾಣಕ್ಕೆ ನೀಡಲಾಗಿದೆ. ಈಗಾಗಲೇ ತಾಯಿಯ ಗರ್ಭ ಗುಡಿ ನಿರ್ಮಾಣವಾಗಿದ್ದು, ಫೆ. 5 ರಿಂದ 9ರವರೆಗೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸ್ಥಳದಲ್ಲಿ ಬರುವಂತ ಭಕ್ತಾಧಿಗಳಿಗೆ ಉಳಿಯುವ ವ್ಯವಸ್ಥೆ ಮತ್ತು ಉಚಿತ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು, ಈಗಾಗಲೇ 1.20 ಕೋಟಿ ರೂ ವೆಚ್ಚದಲ್ಲಿ ಶಿಲೆಯಿಂದ ಗರ್ಭಗುಡಿ ನಿರ್ಮಾಣವಾಗಿದೆ. ಇದರೊಂದಿಗೆ 108 ಅಡಿ ಎತ್ತರದ ಪಾಂಡುರಂಗನ ವಿಗ್ರಹವನ್ನು ಸಿಮೆಂಟಿನಲ್ಲಿ ನಿರ್ಮಾಣ ಮಾಡಲಾಗುವುದು.
ದಾನಿಗಳಿಂದ ಹಣವನ್ನು ಸಂಗ್ರಹ ಮಾಡುವುದರ ಮೂಲಕ ಕಾರ್ಯವನ್ನು ಮಾಡಲಾಗುತ್ತಿದೆ. ಮಹಾರಾಷ್ಟ್ರಕ್ಕೆ ಹೋಗಿ ತುಳಜಾ ಭವಾನಿಯವರ ದರ್ಶನ ಮಾಡುವ ಬದಲು ಇಲ್ಲಿಯೇ ಹತ್ತಿರದಲ್ಲಿ ನಾವು ನಿರ್ಮಾಣ ಮಾಡುತ್ತಿರುವ ದೇವಿಯನ್ನು ದರ್ಶನ ಮಾಡಬಹುದಾಗಿದೆ ಎಂದರು.
ಪೂರ್ಣ ಪ್ರಮಾಣದಲ್ಲಿ ಎಲ್ಲಾ ರೀತಿಯ ಸೌಲಭ್ಯವನ್ನು ಒಳಗೊಂಡಂತೆ ನಿರ್ಮಾಣ ಮಾಡಲು ಸುಮಾರು 15 ಕೋಟೊ ರೂ ವೆಚ್ಚವಾಗಲಿದೆ ಹಂತ ಹಂತವಾಗಿ ನಿರ್ಮಾಣವನ್ನು ಮಾಡಲಾಗುವುದು.ಫೆ. 9 ರಂದು ನಡೆಯುವ ಧಾರ್ಮಿಕ ಸಭೆಗೆ ರಾಜಕಾರಣಿಗಳು ವಿವಿಧ ಮಠಾಧೀಶರು ಆಗಮಸಲಿದ್ದಾರೆ. ಮಹಾರಾಷ್ಟ್ರದ ನಮ್ಮ ಗುರುಗಳಾದ ಭೋದಲೆ ಮಹಾರಾಜ್ ರವರು ಪಂಡರಾಪುರದಿಂದ ಆಗಮಿಸಲಿದ್ದಾರೆ.
ತುಳಾಜಪುರದ ಮಾದರಿಯಲ್ಲಿಯೇ ದೇವಿಯ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದ್ದು, ಗರ್ಭಗುಡಿ ನಿರ್ಮಾಣಕ್ಕೆ ಬಾದಾಮಿಯ ಕಲ್ಲನ್ನು ಬಳಕೆ ಮಾಡಲಾಗಿದೆ ಎಂದು ಸಂತೋಷ್ ತಿಳಿಸಿದರು.
ಫೆ. 5 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗುರುವಂದನೆ, ಗಣಪತಿ ಪೂಜೆ, ಪುಣ್ಯಾಹ ನಾಂದಿ, ಗಂಗಾಪೂಜೆ, ಮಹಾಸಂಕಲ್ಪ, ಕೌತುಕ ಬಂಧನ, ಪಂಚಗವ್ಯ ಹವನ, ನವಗ್ರಹ ಹೋಮ ಚತುರ್ವೇದ ಪಾರಾಯಣ, ಸಂಜೆ ಯಾಗಶಾಲಾ ಪ್ರವೇಶ, ದಿಕಾಲ್ಪಕ ಪ್ರಾರ್ಥನೆ, ಅಷ್ಟಮೂರ್ತಿ ಪ್ರಾರ್ಥನೆ, ಮಂಡಲ ದರ್ಶನ, ಕಲಶ ಸ್ಥಾಪನೆ, ಗೋಪೂಜಾ, ಸ್ಥಾನಶುದ್ದಿ, ಮಹಾ ಸುದರ್ಶನ ಹೋಮ, ವಾಸ್ತು ಪೂಜೆ ನಡೆಯಲಿದೆ.
ಫೆ.6 ರಂದು ಬೆಳಿಗ್ಗೆ ಪುಣ್ಯಾಹ, ಬಿಂಬಶುದ್ದಿ ಅಕ್ಷತಹೋಮ, ಅಗ್ನಿಪ್ರತಿಷ್ಠಾನೆ ಸೌರಹೋಮ, ಅಗ್ಮಿಜನನ ಹೋಮ, ಅಧಿವಾಸ ಹೋಮ, ಶಾಂತಿ ಹೋಮ, ರತ್ನನಾಸ ಹೋಮ, ಅಷ್ಟಬಂಧಿ ಶುದ್ದಿ, ರುದ್ರಜಪ ಪಂಚಶಾಂತಿ ಕಾರ್ಯಕ್ರಮಗಳು ನಡೆಯಲಿದೆ.
ಫೆ. 7 ರಂದು ಬೆಳಿಗ್ಗೆ 8.16ರಲ್ಲಿ ದೇವರ ಪ್ರತಿಷ್ಠೆ ಶಿಖರ ಪ್ರತಿಷ್ಠೆ, ಸಂಜೆ ಕಲಾತತ್ವ ಹೋಮ, ಕಲಶಾಭೀಷೇಕ ಮಹಾ ಪೂಜಾ, ನವಕ್ಷಾರಿ ಜಪ ನಡೆಯಲಿದೆ.
ಫೆ. 8 ರಂದು ಬೆಳಿಗ್ಗೆ 109 ಬ್ರಹ್ಮ ಕಲಶ ಸ್ಥಾಪನೆ, ದುರ್ಗಾ ಹೋಮ, ಸಪ್ತಶತಿ ಪಾರಾಯಣ ಅಧಿವಾಶಹೋಮ ಕಲಶಾಭೀಷೇಕ 10 ಗಂಟೆಯಿಂದ ಧರ್ಮಸಭೆ ನಡೆಯಲಿದೆ.
ಫೆ. 9 ರಂದು ಬೆಳಿಗ್ಗೆ 7.30 ರಿಂದ ಶತಚಂಡಿ ಹವನ, ಮಹಾ ಪೂರ್ಣಾಹುತಿ, ಕುಮಾರಿ ಪೂಜೆ, ಸುವಾಸೀನಿ ಪೂಜೆ, ದಂಪತಿ ಪೂಜೆ, ರಾಷ್ಟರ್ಶಿವಾದ ನಡೆಯಲಿದೆ.
ಗೋಷ್ಠಿಯಲ್ಲಿ ಭಾವಸಾರ ಕ್ಷತೀಯ ಸಮಾಜದ ಆರ್.ಎಂ ಶ್ಯಾಮ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ವಿಶ್ವನಾಥ್, ದಾಸ್ಯ ನಾಯ್ಕ್, ಪ್ರಕಾಶ್ ನಾಗಾರಾಜ್ ಬೇದ್ರೇ ಭಾಗವಹಿಸಿದ್ದರು.